ರೈತರ ಬದುಕಿಗೆ ಬರೆ । ಪರಿಹಾರಕ್ಕಾಗಿ ಕಾದು ಕುಳಿತ ಅನ್ನದಾತರು । ತಾಲೂಕಿನಲ್ಲಿ ₹60 ಕೋಟಿಗೂ ಹೆಚ್ಚು ನಷ್ಟ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಮುಂಗಾರು ಮಳೆ ನಂಬಿದ ತಾಲೂಕಿನ ರೈತರು ಬಿತ್ತಿದ ಬೀಜ ಮೊಳಕೆಯೊಡೆದು ಕಾಯಿ ಕಟ್ಟುವ ಮುನ್ನವೇ ವರುಣನ ಅವಕೃಪೆಯಿಂದಾಗಿ ಬೆಳೆಗಳೆಲ್ಲಾ ಒಣಗಿದ್ದು ನಷ್ಟಕ್ಕೆ ಸಿಲುಕಿದ ಅನ್ನದಾತರು ಸರ್ಕಾರದ ಬರ ಪರಿಹಾರದ ನಿರೀಕ್ಷೆಯಲ್ಲಿ ಕಾಯುವಂತಾಗಿದೆ.ಮುಂಗಾರು ಕಳೆದು ಹಿಂಗಾರು ಆರಂಭವಾದರೂ ತಾಲೂಕಿನಲ್ಲಿ ವರುಣನ ಸುಳಿವಿಲ್ಲ. ಆರಂಭದಲ್ಲಿ ಬಿದ್ದ ಹದ ಮಳೆಯನ್ನೇ ನೆಚ್ಚಿಕೊಂಡು ಬಿತ್ತಿದ ಫಸಲು ಬಿಸಿಲ ಹೊಡೆತಕ್ಕೆ ಒಣಗುತ್ತಿವೆ.
ನಾಲ್ಕು ತಿಂಗಳು ಕಳೆದರೂ ಪಸಲು ಮೇಲೇಳದೇ ಬರದ ದವಡೆಗೆ ಸಿಲುಕಿದ್ದು ಜನ ಜಾನುವಾರುಗಳ ಬದುಕನ್ನೇ ಮೂರಾ ಬಟ್ಟಿ ಮಾಡಿದೆ. ಈ ಬಾರಿ ಎದುರಾಗಿರುವ ಬೀಕರ ಬರಗಾಲ ಅವಲೋಕಿಸಿದ ಸರ್ಕಾರ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.ರಾಜ್ಯ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ತಂಡ ಬರ ವೀಕ್ಷಿಸಿ ತಿಂಗಳು ಕಳೆದರೂ ನಷ್ಟ ಪರಿಹಾರ ಕಾಣದೆ. ರೈತರು ಪರಿಹಾರಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಈ ಬಾರಿ ಸಂಪೂರ್ಣವಾಗಿ ಕೈಕೊಟ್ಟಿದೆ.
ಬರದ ಹೊಡೆತಕ್ಕೆ ಅಂತರ್ಜಲ ಕುಸಿತ ಕಂಡು ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ ರೇಷ್ಮೆ ಬೆಳೆ ವಿಸ್ತರಣೆಗೆ ಅಡ್ಡಗಾಲಾಗಿದೆ. ಜೊತೆಗೆ ದಾಳಿಂಬೆ, ಪಪ್ಪಾಯಿ, ಹೂ ತೋಟಗಳು ಸೇರಿ ತೋಟಗಾರಿಕೆ ಬೆಳೆಗಳು ಗಣನೀಯವಾಗಿ ಕುಸಿತ ಕಂಡಿದೆ.ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ 40 ಸಾವಿರ ಹೆಕ್ಟೆರ್ಗೂ ಹೆಚ್ಚು ಕೃಷಿ ಯೋಗ್ಯ ಭೂಮಿ ತಾಲೂಕಿನಲ್ಲಿ ಇದ್ದು ಈ ಬಾರಿಯ ಬರ ನಿಗದಿತ ಬಿತ್ತನೆಯ ಗುರಿಯನ್ನು ನುಂಗಿ ಹಾಕಿದೆ. ಅಷ್ಟೋ, ಇಷ್ಟೋ ಬಿತ್ತನೆ ಮಾಡಿದ ಪಸಲು ಕಾಳು ಕಟ್ಟುವ ಹಂತದಲ್ಲೇ ಕಮರಿದ್ದು ರೈತರ ಬದುಕಿಗೆ ಬರೆ ಎಳೆದಂತಾಗಿದೆ. ಈ ಬಾರಿ ತಾಲೂಕಿನಲ್ಲಿ ಶೇ.80ರಷ್ಟು ಬೆಳೆ ಹಾಳಾಗಿದ್ದು 60 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಜೂನ್, ಜುಲೈ ಹಾಗೂ ಆಗಸ್ಟ್ನಲ್ಲಿ ಆಗಾಗ ಬಿದ್ದಿದ್ದ ಮಳೆಗೆ ಬಿತ್ತನೆ ಮಾಡಿದ್ದ ಅನ್ನದಾತರು ಉತ್ತಮ ಫಸಲು ಬರುವುದೆಂಬ ನಿರೀಕ್ಷೆಯಲ್ಲಿದ್ದಾಗಲೇ ಮಳೆರಾಯನ ಅವಕೃಪೆ ಎದುರಾಯಿತು.ಚಳಿಗಾಲ ಆರಂಭದ ದಿನಗಳಲ್ಲಿ ರಣ ಬಿಸಿಲು ಅಬ್ಬರಿಸುತ್ತಿದೆ. ಬಿಸಿಲ ಝಳಕ್ಕೆ ಕೃಷಿ ಭೂಮಿ ಕಾದ ಕಬ್ಬಿಣದಂತಾಗಿದೆ. ಸಾಲಾ ಮಾಡಿ ಬಿತ್ತನೆ ಮಾಡಿದ ಪಸಲು ಕಣ್ಣೆದುರೇ ಕಮರುತ್ತಿರುವುದನ್ನು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ. ಕಳೆದ ಬಾರಿ ಬೆಳೆ ಹಾನಿಯಾಗಿದ್ದರೂ ಪರಿಹಾರ ಮತ್ತು ವಿಮೆ ಬಾರದೆ ರೈತರು ಸಂಕಷ್ಟ ಪಟ್ಟಿದ್ದರು. ಆದರೆ, ಈ ಬಾರಿ ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಈಗಾಗಲೇ ಘೋಷಿಸಿರುವುದು ತುಸು ನೆಮ್ಮದಿ ತರಿಸಿದ್ದು, ಈ ಸಲವಾದರೂ ಹೆಚ್ಚಿನ ಪರಿಹಾರ ಸಿಗುವುದೆಂಬ ಆಸೆಯು ಅನ್ನದಾತರಲ್ಲಿ ಚಿಗುರೊಡೆದಿದೆ.