ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಡಾ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಜಿಲ್ಲಾ ಅಹಿಂದ ಒಕ್ಕೂಟದಿಂದ ಪ್ರತಿಕೃತಿ ದಹಿಸಿ, ರಸ್ತೆ ತಡೆ ನಡೆಸುತ್ತಿದ್ದ ವೇಳೆ ದೊಡ್ಡ ಹೈಡ್ರಾಮಾವೇ ನಡೆಯಿತು.ನಗರದ ಶ್ರೀ ಜಯದೇವ ವೃತ್ತದಿಂದ ಗಾಂಧಿ ವೃತ್ತದವರೆಗೂ ಅಹಿಂದ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ, ಕಾರ್ಯಕರ್ತನೊಬ್ಬ ತಂದಿದ್ದ ಪೆಟ್ರೋಲ್ ಟೈಯರ್ ಮೇಲೆ ಸುರಿಯುತ್ತಿದ್ದಾಗ ಮಹಿಳಾ ಪೊಲೀಸರು ಸೇರಿ 3-4 ಜನ ಸಿಬ್ಬಂದಿ ಮೇಲೆ ಪೆಟ್ರೋಲ್ ಬಿದ್ದಿತು. ಆಗ ಮತ್ತೋರ್ವ ಬೆಂಕಿ ಕಡ್ಡಿ ಗೀರುತ್ತಿದ್ದಂತೆ ಎಲ್ಲರೂ ದೂರ ಸರಿದಿದ್ದರಿಂದ ರಸ್ತೆಯಲ್ಲೇ ದಗ್ಗನೇ ಬೆಂಕಿಯ ಜ್ವಾಲೆ ಹೊತ್ತಿಕೊಂಡಿದ್ದರಿಂದ ಯಾವುದೇ ಅಪಾಯ ಆಗಲಿಲ್ಲ.
ಇದೇ ವೇಳೆ ಮಾತನಾಡಿದ ಜಿಪ ಮಾಜಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ತೇಜೋವಧೆಗೆ ಮುಂಚಿನಿಂದಲೂ ಹುನ್ನಾರ ನಡೆದಿದೆ. ಈಗ ರಾಜಭವನವನ್ನೇ ದುರ್ಬಳಕೆ ಮಾಡಿಕೊಂಡು, ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರ ಪದಚ್ಯುತಿಗೆ ಪ್ರಯತ್ನ ನಡೆಸಲಾಗಿದೆ. ಇಂತಹ ಧೋರಣೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆ ತಂದು, ಇಡೀ ದೇಶದಲ್ಲೇ ಮೆಚ್ಚುಗೆ ಪಡೆದಿದೆ. ಸಿಎಂ ಸಿದ್ದರಾಮಯ್ಯ ಜನಪ್ರಿಯತೆ, ವರ್ಚಸ್ಸು ಕುಗ್ಗಿಸಲು ಬಿಜೆಪಿ-ಜೆಡಿಎಸ್ ಪಕ್ಷಗಳು ಜಂಟಿಯಾಗಿ ಸಂಚು ಮಾಡುತ್ತಿವೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ನಾಯಕರು ಕುತಂತ್ರ ಮಾಡುತ್ತಿದ್ದಾರೆ. ರಾಜ್ಯಪಾಲರ ಮುಖಾಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ, ಸಿದ್ದರಾಮಯ್ಯನವರ ನೈತಿಕ ಬಲ ಕುಸಿಯುವಂತೆ ಹುನ್ನಾರ ನಡೆಸಿದ್ದಾರೆ. ಇಂತಹವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಅಬ್ರಹಾಂ ನೀಡಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯ ವಿರುದ್ಧ ಇಂತಹ ಸಂಚು, ಹುನ್ನಾರವನ್ನು ರಾಜ್ಯದ ಜನತೆ, ಅಹಿಂದ ವರ್ಗಗಳು ಎಂದಿಗೂ ಸಹಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಹೋರಾಟಕ್ಕೆ ಈ ಕ್ಷಣದಿಂದಲೇ ಮುನ್ನುಡಿ ಬರೆದಿದ್ದೇವೆ. ಸಂಚು ನಡೆಸಿರುವ ಬಿಜೆಪಿ-ಜೆಡಿಎಸ್ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಶೀಘ್ರವೇ ರಾಜಭವನ ಚಲೋ ಹೋರಾಟ ನಡೆಸಲಿದ್ದಾರೆ ಎಂದು ಎಚ್.ಬಿ.ಮಂಜಪ್ಪ ಹೇಳಿದರು.ಒಕ್ಕೂಟದ ಮುಖಂಡರಾದ ಕುರುಬ ಸಮಾಜದ ಮಂಜುನಾಥ ಇಟ್ಟುಗುಡಿ, ನಾಯಕ ಸಮಾಜದ ಹೊದಿಗೆರೆ ರಮೇಶ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಎಸ್.ಮಲ್ಲಿಕಾರ್ಜುನ, ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ಎ.ನಾಗರಾಜ, ಅಬ್ದುಲ್ ಲತೀಫ್, ಉದಯಕುಮಾರ, ಮುಸ್ಲಿಂ ಮುಖಂಡ ಅಯೂಬ್ ಪೈಲ್ವಾನ್, ಕತ್ತಲಗೆರೆ ತಿಪ್ಪಣ್ಣ, ಹೊನ್ನಾಳಿ ಎ.ಕೆ.ನಾಗಪ್ಪ, ಸಿದ್ದಪ್ಪ, ಭೋವಿ ಸಮಾಜದ ಯುವ ಮುಖಂಡ ಡಿ.ವಿ.ಮಲ್ಲಿಕಾರ್ಜುನಸ್ವಾಮಿ, ಗುರುರಾಜ, ಕುರುಬ ಸಮಾಜದ ಎಚ್.ಬಿ.ಪರಶುರಾಮಪ್ಪ, ಎಸ್.ಎಸ್.ಗಿರೀಶ, ಲಿಂಗರಾಜ, ಕುರುಬ ವಿದ್ಯಾವರ್ಧಕ ಸಂಘದ ದೀಪಕ್ ಜೋಗಪ್ಪನವರ್, ಎಸ್.ಎಸ್.ರವಿಕುಮಾರ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ ಇತರರು ಇದ್ದರು.
ಇದಕ್ಕೂ ಮುನ್ನ ಕುರುಬರ ವಿದ್ಯಾವರ್ಧಕ ಸಂಘದ ಸಭೆಯಲ್ಲಿ ರಾಜ್ಯಪಾಲರ ಅನುಮತಿ ವಿರುದ್ಧ ಖಂಡನಾ ನಿರ್ಣಯ ಕೈಗೊಂಡು ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಯಿತು.