ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಅಹಿಂದ ಅಹಿಂದ ಎಂದು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ಬಂದು 8 ತಿಂಗಳಾದರೂ ಹಿಂದವನ್ನು ಹಿಂದಿಕ್ಕಿ ಕೇವಲ ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು.
ಅವರು ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭ, ನೂತನ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಪದಗ್ರಹಣ ಹಾಗೂ ರಾಜ್ಯ ಕಾರ್ಯದರ್ಶಿ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿಂದುಳಿದ ಹಾಗೂ ದಲಿತ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ. ಶೋಷಿತರ ಧ್ವನಿಯಾಗಿರುವ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಕಾರಣೀಭೂತವಾದ, ಅವರ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ವಿ.ಪಿ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಬಿಜೆಪಿ ಬೆಂಬಲಿತ ಕೇಂದ್ರ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯಂತೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು.
ಕೇಂದ್ರದಲ್ಲಿ 28 ಜನ ಹಿಂದುಳಿದ ವರ್ಗದ ಸಚಿವರನ್ನು ಹೊಂದಿರುವ ಮೋದಿ ಸರ್ಕಾರ ದಲಿತ, ಹಿಂದುಳಿದವರ ಪರ ಎಂಬುವದನ್ನು ಸಾಬೀತುಪಡಿಸಿತು ಎಂದು ಶ್ಲಾಘಿಸಿದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಆ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯನ್ನು ವಿವಸ್ತ್ರಗೊಳಿಸಲಾಗುತ್ತದೆ. ಆದರೆ ಇಡೀ ಸರ್ಕಾರವೇ ಅಲ್ಲಿದ್ದರೂ ಆ ಮಹಿಳೆಗೆ ಭೇಟಿ ಕೊಟ್ಟು ಧೈರ್ಯ ಹೇಳಲು ಮುಂದಾಗಲಿಲ್ಲ.
ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ, ಸ್ಥಳೀಯ ಮುಖಂಡರ ಜೊತೆಗೆ ಅಲ್ಲಿಗೆ ತೆರಳಿ ಮಹಿಳೆಗೆ ಧೈರ್ಯ ನೀಡಿ ಬಂದಿದ್ದೇವೆ ಕಾಂಗ್ರೆಸ್‌ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ ಎಂದರು.
ಮಂಡ್ಯ ಕೆರೆಗೋಡು ಘಟನೆ, ರಾಮ ಭಕ್ತರ ಅಪಮಾನಿಸಿದ ಸರ್ಕಾರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವ ಹಿನ್ನೆಲೆ ಅದಕ್ಕೆ ಗೌರವ ನೀಡಲು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಪಂ ವತಿಯಿಂದ 150 ಧ್ವಜ ಸ್ಥಂಭಗಳನ್ನು ನಿರ್ಮಾಣ ಮಾಡಿ ಅದಕ್ಕೆ ರಾಮಧ್ವಜವನ್ನು ಹಾಕಿದ್ದನ್ನು ಸಹಿಸದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಕಳುಹಿಸಿ ಧ್ವಜವನ್ನು ತೆರವುಗೊಳಿಸುವ ಮೂಲಕ ದೇಶದ, ರಾಜ್ಯದ ರಾಮ ಭಕ್ತರನ್ನು ಅವಮಾನಗೊಳಿಸುವ ಪ್ರಯತ್ನವನ್ನು ಮಾಡಿದೆ.
ಕಾಂಗ್ರೆಸ್ ಟೊಳ್ಳು ಭರವಸೆ ಜನರ ಮನಸ್ಸಿನಿಂದ ಕಿತ್ತು ಹಾಕಿ: ನರೇಂದ್ರ ಮೋದಿ ಅವರು ಹಿಂದುಳಿದ, ದಲಿತ ಸೇರಿ ಎಲ್ಲ ಸಮುದಾಯದವರಿಗೆ ಸಮಾನವಾಗಿ ಕಾಣುತ್ತ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಟೊಳ್ಳು ಭರವಸೆಗಳನ್ನು ಜನರ ಮನಸ್ಸಿನಿಂದ ಕಿತ್ತು ಹಾಕಿ ಈ ದೇಶಕ್ಕೆ ನರೇಂದ್ರ ಮೋದಿ ಮಾತ್ರ ಭರವಸೆ ಎಂಬುವದನ್ನು ಪ್ರತಿಯೊಬ್ಬ ಕಾರ್ಯಕರ್ತ ಗುಂಪು ಗುಂಪಲ್ಲಿ ಮಾತನಾಡುವ ಮೂಲಕ, ನರೇಂದ್ರ ಮೋದಿ ಅವರು ಕೊಟ್ಟಿರುವ ಜನಪರ ಕಾರ್ಯಕ್ರಮಗಳನ್ನು ಜನರ ಮನೆ ಮನಗಳಿಗೆ ತಲುಪಿಸುವ ಮುಖೇನ ರಾಜ್ಯದಲ್ಲಿ ಬಿಜೆಪಿ ಧ್ವಜ ಹಾರುವಂತೆ ಮಾಡಲು ಬಿಜೆಪಿ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವಂಥ ಸನ್ನಿವೇಶವನ್ನು ನಾನೆಂದೂ ತರಲು ಬಿಡುವದಿಲ್ಲ ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ನನ್ನ ಅಧಿಕಾರದ ಅವಧಿಯಲ್ಲಿ ನಾನು ಭರವಸೆ ನೀಡುತ್ತೇನೆ.
ನಮ್ಮ ಮುಂದಿರುವ ಗುರಿ ಒಂದೇ, ಅದು ಬಿಜೆಪಿ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿ ಮತ್ತೇ ಪ್ರಧಾನಿ ಆಗಬೇಕು ಎಂದು ಮನಿವಿಸಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ ಸರ್ಕಾರ, ದಲಿತ ವಿರೋಧಿ ಹಾಗೂ ಮಹಿಳೆ ಮತ್ತು ಯುವಕರ ವಿರೋಧಿ ಸರ್ಕಾರವಾಗಿದ್ದು ಬಹಳ ದಿನ ಈ ಸರ್ಕಾರ ನಡೆಯುವದಿಲ್ಲ.
ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮುಖಂಡರ ಹೇಳಿಕೆಗಳು, ಈ ಸರ್ಕಾರದ ನಡುವಳಿಕೆಗಳು ರಾಜ್ಯದ ಪ್ರತಿಯೊಬ್ಬ ಜನ ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಬಿಜೆಪಿಯನ್ನು ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿಸಲು ಶ್ರಮಿಸಬೇಕು ಎಂದು ಬಿವೈ ವಿಜಯೇಂದ್ರ ಕರೆ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ನೂತನ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರುಗಳಾದ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ, ಪ್ರಭು ಚವ್ಹಾಣ್, ಡಾ. ಸಿದ್ದು ಪಾಟೀಲ್, ಶರಣು ಸಲಗರ, ಕಲಬುರಗಿಯ ಬಸವರಾಜ ಮತ್ತಿಮೂಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್, ಎಂಎಲ್ಸಿ ರಘುನಾಥರಾವ್ ಮಲ್ಕಾಪೂರೆ
ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಗುಂಡಪ್ಪ ಬಿರಾದಾರ, ಎಂಜಿ ಮೂಳೆ, ಸುನೀಲ ವಲ್ಯಾಪೂರೆ, ಸುಭಾಷ, ಕಲ್ಲೂರ, ಅಮರನಾಥ ಪಾಟೀಲ್, ರೌಫೋದ್ದಿನ ಕಚೇರಿವಾಲೆ, ಬಾಬು ವಾಲಿ, ಶಶಿಧರ ಹೊಸಳ್ಳಿ, ನಂದಕಿಶೋರ ವರ್ಮಾ ಸೇರಿದಂತೆ ಇನ್ನಿತರರು ಇದ್ದರು, ವಿಜಯಕುಮಾರ ಪಾಟೀಲ್ ಗಾದಗಿ ನಿರೂಪಿಸಿದರು. ಅರಹಂತ ಸಾವಳೆ ಸ್ವಾಗತಿಸಿದರು.