ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಅಹಿಂದ ಸಂಘಟನೆ ಸ್ಥಾಪನೆಯಾಗಿ 25 ವರ್ಷಗಳಾಗಿರುವ ಸವಿನೆನಪಿಗಾಗಿ ಏ.26ರಂದು ಹುಬ್ಬಳ್ಳಿಯಲ್ಲಿ ಜಾರಕಿಹೊಳಿಯವರ ನೇತೃತ್ವದಲ್ಲಿ ಅಹಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂದ ಸಂಘಟನೆಯ ಉದ್ದೇಶದಂತೆ ಸಾಹಿತ್ಯ, ರಾಜಕೀಯ, ಕ್ರೀಡೆ, ಶೈಕ್ಷಣಿಕ ಸೇರಿ ಹಲವು ವಿಚಾರಗಳಲ್ಲಿ ಮುಖಂಡರು ಕೆಲಸ ಮಾಡಿದ್ದಾರೆ. ಮೊದಲಿನಿಂದಲೂ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಅಹಿಂದ ಮುಖಂಡರು ಇದೀಗ ಹಳೆ ಬೇರು ಹೊಸ ಚಿಗುರು ಎಂಬಂತೆ ಕೆಲಸ ಮಾಡಲಿದ್ದಾರೆ. ಅಹಿಂದ ವರ್ಗದ ಯುವ ಪೀಳಿಗೆಗೆ ರಾಜಕೀಯ ಅರಿವು ಮೂಡಿಸುವ ಕೆಲಸ ಸಹ ಆಗುತ್ತಿದೆ. ಈ ವಿಚಾರ ಸಂಕಿರಣದಲ್ಲಿ ಅಹಿಂದ ವರ್ಗದ ಎಲ್ಲ ಮುಖಂಡರು, ಚಿಂತಕರು, ವಿಚಾರವಾದಿಗಳು ಭಾಗವಹಿಸಲಿದ್ದಾರೆ ಎಂದರು.

ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಅಹಿಂದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ 25 ವರ್ಷಗಳ ಹಿಂದೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಸಂಘಟನೆ ಸ್ಥಾಪಿಸಲಾಗಿತ್ತು. ಅದುವೆ ಸಿದ್ದರಾಮಯ್ಯನವರು ಎರಡು ಬಾರಿ ಸಿಎಂ ಆಗಲು ಸಹಕಾರವಾಗಿದೆ. ಅಹಿಂದ ಸಂಘಟನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಬೇಕಿದೆ. ರಾಜಕೀಯವಾಗಿ, ಸಮಾಜಿಕವಾಗಿ ಅಹಿಂದ ವರ್ಗಕ್ಕೆ ಅನುಕೂಲ ಕಲ್ಪಿಸಬೇಕಿರುವುದರಿಂದ ಈ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ಅಬ್ದುಲಹಮೀದ ಮುಶ್ರೀಫ್ ಮಾತನಾಡಿ, 25ವರ್ಷ ಮೊದಲು ಹುಟ್ಟಿದ್ದ ಅಹಿಂದ ಸಂಘಟನೆಯ ಬೆಳ್ಳಿಹಬ್ಬವನ್ನು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಂ.ಪಾಟೀಲ‌ ಗಣಿಹಾರ, ಚಂದ್ರಶೇಖರ ಕೊಡಬಾಗಿ, ಜಕ್ಕಪ್ಪ ಯಡವೆ, ಡಿ.ಎಸ್.ಗಸ್ತಿ, ವಸಂತ ಹೊನಮೊಡೆ, ರಮೇಶ ಭಂಟನೂರ, ಮಲ್ಲು ಬಿದರಿ ಇದ್ದರು.