ವಿಧಾನಸಭೆಗೆ ಬರುವ ಶಾಸಕರ ಮೇಲೆ ಎಐ ಕ್ಯಾಮೆರಾ ಕಣ್ಣು!

| Published : Jul 16 2024, 12:30 AM IST

ಸಾರಾಂಶ

ವಿಧಾನಸಭೆಗೆ ಪ್ರವೇಶಿಸುವ ಹಾಗೂ ಹೊರ ನಡೆಯುವ ಶಾಸಕರನ್ನು ಸಮಯ ಹಾಗೂ ಭಾವಚಿತ್ರ ಸಹಿತ ಸೆರೆ ಹಿಡಿಯಲು ಮೂರೂ ದ್ವಾರಗಳಲ್ಲೂ ತಲಾ ಎರಡು ಎಐ ಕೆಮೆರಾ (ಆರ್ಟಿಫಿಷಿಯಲ್‌ ಇಂಟಿಲಿಜೆನ್ಸ್‌) ಅಳವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ವಿಧಾನಸಭೆಗೆ ಪ್ರವೇಶಿಸುವ ಹಾಗೂ ಹೊರ ನಡೆಯುವ ಶಾಸಕರನ್ನು ಸಮಯ ಹಾಗೂ ಭಾವಚಿತ್ರ ಸಹಿತ ಸೆರೆ ಹಿಡಿಯಲು ಮೂರೂ ದ್ವಾರಗಳಲ್ಲೂ ತಲಾ ಎರಡು ಎಐ ಕೆಮೆರಾ (ಆರ್ಟಿಫಿಷಿಯಲ್‌ ಇಂಟಿಲಿಜೆನ್ಸ್‌) ಅಳವಡಿಸಲಾಗಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ‘ಸದನಕ್ಕೆ ಎಲ್ಲರಿಗಿಂತಲೂ ಮೊದಲು ಬರುವ ಶಾಸಕರಿಗೆ ಅಭಿನಂದನೆ ಸಲ್ಲಿಸುವ ಸಂಪ್ರದಾಯ ಶುರು ಮಾಡಿದ್ದೇವೆ. ಸದನಕ್ಕೆ ತಡವಾಗಿ ಬಂದರೂ ಸದನ ಮುಗಿಯುವವರೆಗೂ ಇರುವ ಸದಸ್ಯರನ್ನು ಗುರುತಿಸುತ್ತಿಲ್ಲ ಎಂಬುದು ಕೆಲ ಸದಸ್ಯರ ಆಕ್ಷೇಪವಾಗಿತ್ತು. ಇದನ್ನು ತಪ್ಪಿಸಲು ಬರುವ ಸಮಯ ಹಾಗೂ ಹೋಗುವ ಸಮಯವನ್ನು ಖಚಿತವಾಗಿ ದಾಖಲಿಸಲು ಎಐ ಕೆಮೆರಾ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಕೆಮೆರಾ ಸದನಕ್ಕೆ ಪ್ರವೇಶಿಸುವಾಗ ಸಮಯ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳುತ್ತದೆ. ನೀವು ಕೆಮೆರಾ ಕಡೆಗೆ ಒಂದು ನಿಮಿಷ ನೋಡಬೇಕು. ಹೊರಗೆ ಹೋಗುವಾಗಲೂ ಹೊರ ಭಾಗದಲ್ಲಿರುವ ಕೆಮೆರಾ ಫೋಟೋ ಕ್ಲಿಕ್ಕಿಸಿಕೊಂಡು ಸಮಯದ ಸಹಿತ ಸಭಾಧ್ಯಕ್ಷರ ಕಚೇರಿಗೆ ಮಾಹಿತಿ ರವಾನಿಸುತ್ತದೆ. ಇದರಿಂದ ಯಾರು ಎಷ್ಟೊತ್ತಿಗೆ ಬಂದರು, ಎಷ್ಟೊತ್ತಿಗೆ ಹೋದರು ಎಂಬುದರ ನಿಖರ ಮಾಹಿತಿ ದೊರೆಯಲಿದೆ ಎಂದರು.

ರೂಪಾಶಶಿಧರ್, ಕೆ.ಷಡಕ್ಷರಿ ಅವರಿಂದ ಉದ್ಘಾಟನೆ:

ಇದೇ ವೇಳೆ ಕೆಜಿಎಫ್‌ ಶಾಸಕಿ ರೂಪಾ ಶಶಿಧರ್‌ 9.51ಕ್ಕೆ ಕಲಾಪಕ್ಕೆ ಆಗಮಿಸುವ ಮೂಲಕ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಕೆಮರಾ ಉದ್ಘಾಟಿಸಿದ್ದಾರೆ. ಇನ್ನ, 10.20ಕ್ಕೆ ಹೊರಗೆ ಹೋಗುವ ಮೂಲಕ ಹೊರಗೆ ಹೋಗುವ ಕೆಮೆರಾಗಳನ್ನು ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿದ್ದಾರೆ ಎಂದು ಖಾದರ್‌ ಹಾಸ್ಯ ಮಾಡಿದರು.