ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾನಗರ ಬಳಿಯ ಡಾ. ಯಾವಗಲ್ ಲೇಸರ್ ವೇದಾ ಕ್ಲಿನಿಕ್ನಲ್ಲಿ ಅತ್ಯಾಧುನಿಕ ಫೇಸ್ 3ಡಿ ಎಐ ಸಿಬಿಸಿಟಿ ಸ್ಕ್ಯಾನಿಂಗ್ ಯಂತ್ರವನ್ನು ಪರಿಚಯಿಸಲಾಗುತ್ತಿದೆ.
ಹುಬ್ಬಳ್ಳಿ:
ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾನಗರ ಬಳಿಯ ಡಾ. ಯಾವಗಲ್ ಲೇಸರ್ ವೇದಾ ಕ್ಲಿನಿಕ್ನಲ್ಲಿ ಅತ್ಯಾಧುನಿಕ ಫೇಸ್ 3ಡಿ ಎಐ ಸಿಬಿಸಿಟಿ ಸ್ಕ್ಯಾನಿಂಗ್ ಯಂತ್ರವನ್ನು ಪರಿಚಯಿಸಲಾಗುತ್ತಿದೆ ಎಂದು ಡಾ. ಚಂದ್ರಶೇಖರ ಯಾವಗಲ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ತಪಾಸಣಾ ಯಂತ್ರವನ್ನು ಬ್ರೆಜಿಲ್ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅದರ ಎಐ ಆಧಾರಿತ ತಪಾಸಣಾ ತಂತ್ರಜ್ಞಾನವು ಬಾಯಿ ಕ್ಯಾನ್ಸರ್, ಸೈನಸ್ ಸಮಸ್ಯೆ, ತಲೆ ಮತ್ತು ಕುತ್ತಿಗೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ದಂತ ತಪಾಸಣೆಗೆ ಸಹಕಾರಿಯಾಗಲಿದೆ. ಈ ವ್ಯವಸ್ಥೆಯ ಮೂಲಕ ರೋಗಿಗೆ ತಪಾಸಣೆ ನಡೆಸಿದ ಕೇವಲ 30 ಸೆಕೆಂಡುಗಳಲ್ಲಿ ಸ್ಪಷ್ಟವಾದ ಎಐ ವರದಿ ಲಭ್ಯವಾಗಲಿದ್ದು, ನಂತರ ರೇಡಿಯಾಲಜಿಸ್ಟ್ಗಳು ಆ ವರದಿ ಪರಿಶೀಲಿಸಿ ಸುಮಾರು ಅರ್ಧ ಗಂಟೆಯೊಳಗೆ ಅಂತಿಮ ಅನುಮೋದಿತ ವರದಿ ನೀಡಲಿದ್ದಾರೆ ಎಂದರು.
ಈ ಹಿಂದೆ ಇಂತಹ ತಪಾಸಣೆಯ ವರದಿ ಪಡೆಯಲು ವಾರಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ, ಹೊಸ ತಂತ್ರಜ್ಞಾನದ ಮೂಲಕ ಒಂದೇ ದಿನದಲ್ಲಿ ರೋಗಿಗಳಿಗೆ ವರದಿ ನೀಡಲು ಸಾಧ್ಯವಾಗಲಿದೆ. ಎಐ ಮೂಲಕ ಸಿದ್ಧವಾಗುವ ವರದಿಯನ್ನು ತಜ್ಞರು ಪರಿಶೀಲಿಸಿ ದೃಢೀಕರಿಸಲಿದ್ದಾರೆ. ಈ ತಂತ್ರಜ್ಞಾನವು ಶೇ. 99.99ರಷ್ಟು ಸ್ಪಷ್ಟತೆಯ ವರದಿ ನೀಡುತ್ತದೆ ಎಂದು ಹೇಳಿದರು.ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ತಪಾಸಣಾ ಯಂತ್ರವನ್ನು ಈಗಾಗಲೇ ಅಮೆರಿಕದಲ್ಲಿ ಬಳಸಲಾಗುತ್ತಿದ್ದು, ಉತ್ತರ ಕರ್ನಾಟಕದ ಜನರಿಗೆ ಇಂತಹ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ತಮ್ಮ ಕ್ಲಿನಿಕ್ನಲ್ಲಿ ಅಳವಡಿಸಲಾಗುತ್ತಿದೆ. ಹೊಸ ವ್ಯವಸ್ಥೆಯ ತಪಾಸಣಾ ಶುಲ್ಕ ₹850 ಇರಲಿದೆ. ಈ ಹಿಂದೆ ತಪಾಸಣೆಗೆ ₹550 ಶುಲ್ಕವಿತ್ತು ಎಂದು ಮಾಹಿತಿ ನೀಡಿದರು.
ಫೇಸ್ 3ಡಿ ಎಐ ಸಿಬಿಸಿಟಿ ಸ್ಕ್ಯಾನಿಂಗ್ ಯಂತ್ರವು ಪ್ರಮುಖವಾಗಿ ಬಾಯಿ ಕ್ಯಾನ್ಸರ್, ಏರ್ವೇಸ್ (ಉಸಿರಾಟದ ಮಾರ್ಗ), ಟಿಎಂಜೆ (ದವಡೆಯ ಸಂಧಿ), ಒಪಿಜಿ ಹಾಗೂ ಕೋನ್ ಬೀಮ್ ಕಂಪ್ಯೂಟೆಡ್ ಟೊಮೋಗ್ರಫಿ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ತಪಾಸಣೆಗಳಿಗೆ ನೆರವಾಗಲಿದೆ. ಈ ಯಂತ್ರವನ್ನು ಪ್ರಸಿದ್ಧ ವೆಲ್ಮೆನ್ ಸಂಸ್ಥೆಯ ಮೂಲಕ ಅಳವಡಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಡಾ. ಲಕ್ಷ್ಮೀ ಹಾಗೂ ಡಾ. ರಾಕೇಶ್ ಯಾವಗಲ್ ಇದ್ದರು.