ಧಾರವಾಡ:

ಸ್ನಾತಕೋತ್ತರ ಪದವಿ ಮುಗಿಸಿದರೂ ನನಗೆ ನೌಕರಿ ಸಿಗುತ್ತಿಲ್ಲ. ನನಗೆ ಅನ್ಯ ಭಾಷೆ ಬರುವುದಿಲ್ಲ. ಧಾರವಾಡದಲ್ಲೇ ನೌಕರಿ ಬೇಕು ಎಂಬೆಲ್ಲಾ ಕುಂಟು ನೆಪ ಹೇಳುವ ಕಾಲ ಹೋಗಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ಬೆರೆತು ಎದುರಾಗುವ ಸವಾಲು ಎದುರಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್‌. ಬಾಲಸುಬ್ರಮಣ್ಯ ಸಲಹೆ ನೀಡಿದರು.

ಕರ್ನಾಟಕ ವಿವಿ ಕನಕ ಭವನದಲ್ಲಿ ಪತ್ರಿಕೋದ್ಯಮ ವಿಭಾಗದ ಸಹಕಾರದಲ್ಲಿ ವಾರ್ತಾ ಇಲಾಖೆಯು ಆಯೋಜಿಸಿದ್ದ ಮೀಡಿಯಾ ಫೆಸ್ಟ್‌ನಲ್ಲಿ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಿಷಯಗಳ ವಿಶ್ವಾಸಾರ್ಹತೆ ಕುರಿತು ಮಂಗಳವಾರ ಉಪನ್ಯಾಸ ನೀಡಿದ ಅವರು, ಜಾಗತಿಕವಾಗಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಎಲ್ಲವೂ ಬೆರಳ ತುದಿಯಲ್ಲಿದ್ದು ಕೃತಕ ಬುದ್ಧಿಮತ್ತೆ ಮನುಷ್ಯನ ಬುದ್ಧಿಗೂ ಮೀರಿದ ಕಾರ್ಯ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಮೊಬೈಲ್‌ನಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌ ನೋಡುವುದನ್ನು ಬಿಟ್ಟು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಕೌಶಲ್ಯ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕೆಂದರು.

ಎಐ ಅನಿವಾರ್ಯ:

ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ ಅನಿವಾರ್ಯವಾಗಿದ್ದು, ಪತ್ರಕರ್ತರಾಗ ಬಯಸುವವರು ಸರಿಯಾದ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಪತ್ರಿಕೋದ್ಯಮದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ಸಾಂಪ್ರದಾಯಿಕ ಮಾಧ್ಯಮಗಳಿಗೆ ಸಾಮಾಜಿಕ ಮಾಧ್ಯಮಗಳು ತೀವ್ರ ಸವಾಲು ಒಡ್ಡಿವೆ. ಟಿವಿ, ರೇಡಿಯೋ, ಪತ್ರಿಕೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಜನರು ಬಳಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೃತಕ ಬುದ್ಧಿಮತ್ತೆಯೂ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಸಂಚಲನ ಹಾಗೂ ಸಾಧ್ಯತೆಗಳನ್ನು ತಂದಿದ್ದು, ಅವುಗಳ ಮೂಲಕ ಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಬೇಕೆಂದರು.


ಹಿರಿಯ ಪತ್ರಕರ್ತ ಸುಭಾಸ ಹೂಗಾರ ಮಾತನಾಡಿ, ಸಾಮಾನ್ಯ ಪದವಿ ಪಡೆದ ಪದವೀಧರರು ಈಗ ಅನಕ್ಷರಸ್ಥರು ಎನ್ನುವ ಕಾಲ ಬಂದಿದೆ. ಪದವಿ ಜತೆಗೆ ತಾಂತ್ರಿಕ ಕೌಶಲ್ಯಗಳು ಅಗತ್ಯ. ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭಾಷಾ ಕೌಶಲ್ಯ, ಬರವಣಿಗೆ ಹಾಗೂ ತಂತ್ರಜ್ಞಾನದ ಮಾಹಿತಿ ಅಗತ್ಯ. ವಿದ್ಯಾರ್ಥಿಗಳು ಸಹ ಜಾಗತಿಕ ಮಾಧ್ಯಮದಲ್ಲಾಗುವ ಬದಲಾವಣೆಗಳನ್ನು ಆಗಾಗ ಗಮನಿಸುತ್ತಿರಬೇಕು ಎಂದರು.

ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಅವುಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದೇ ಗೊತ್ತಾಗುತ್ತಿಲ್ಲ. ಇದು ಓದುಗರಿಗೆ ತುಂಬ ಗೊಂದಲ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕೆಲವೇ ಕೆಲವು ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ಗಳಿದ್ದು, ಭಾವಿ ಪತ್ರಕರ್ತರು ಪ್ರಾದೇಶಿಕವಾಗಿ ಸುಳ್ಳು ಸುದ್ದಿ ಪತ್ತೆ ಹಚ್ಚುವ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು ಎಂದು ಸುಭಾಸ ಹೂಗಾರ ಸಲಹೆ ನೀಡಿದರು. ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಸಾಧ್ಯವಾಗದ ಕಾರ್ಯವೊಂದನ್ನು ಸಾಮಾಜಿಕ ಮಾಧ್ಯಮಗಳು ಮಾಡುತ್ತಿದ್ದು, ಈಗ ನಿಜವಾಗಿ ಪ್ರಜಾಪ್ರಭುತ್ವಕ್ಕೆ ಬೆಲೆ ಬಂದಂತಾಗಿದೆ. ಸಾಮಾನ್ಯ ಜನರು ತಮ್ಮ ಅಭಿಪ್ರಾಯ, ಚಿಂತನೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳು ಮುಕ್ತ ವೇದಿಕೆ ಒದಗಿಸಿವೆ. ಆದರೆ, ಕೆಲವು ಸುಳ್ಳು ಸುದ್ದಿಗಳು ಈ ಮಾಧ್ಯಮಗಳಲ್ಲಿ ತೂರಿ ಬರುತ್ತಿದ್ದು, ಯಾವುದು ಸತ್ಯ, ಸುಳ್ಳು ಎಂಬುದನ್ನು ಪತ್ತೆ ಹೆಚ್ಚುವುದೇ ಸವಾಲಾಗಿದೆ ಎಂದು ಡಾ.ಎ.ಎಸ್‌. ಬಾಲಸುಬ್ರಮಣ್ಯ ಹೇಳಿದರು.