ಮೂಡುಬಿದಿರೆ: ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಸಹಯೋಗದಲ್ಲಿ ಮೂಡುಬಿದಿರೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಸ್ಥಾಪಿಸಲಾದ ದೇಶದ ಮೊದಲ ಐಬಿಎಂ ಎಐ ಲ್ಯಾಬ್‌ನ್ನು ಬುಧವಾರ ಉದ್ಘಾಟಿಸಲಾಯಿತು.

ಐಬಿಎಂ ವಾಟ್ಸನ್‌ಎಕ್ಸ್. ಎಐ, ವಾಟ್ಸನ್‌ಎಕ್ಸ್ ಆರ್ಕೆಸ್ಟ್ರೇಟ್ ಹಾಗೂ ಎಐ ಆಧಾರಿತ ಡೆವಲಪರ್ ಉಪಕರಣಗಳಿಂದ ಸಜ್ಜುಗೊಂಡಿರುವ ಈ ಲ್ಯಾಬ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಂಟರ್‌ಪ್ರೈಸ್ ಎಐ ವೇದಿಕೆಗಳು ಹಾಗೂ ನೈಜ ಕೈಗಾರಿಕಾ ಅನ್ವಯಿಕೆಗಳ ಕುರಿತು ನೇರ ಅನುಭವ ನೀಡಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಐಬಿಎಂ ಇಂಡಿಯಾದ ವಾಟ್ಸನ್‌ಎಕ್ಸ್ ಎಐ ವಿಭಾಗದ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯಸ್ಥ ರತೀಶ್ ಮುರಳೀಧರನ್, ಆಳ್ವಾಸ್ ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಸ್ಥಾಪಿಸಿದ ಇಂಜಿನಿಯರಿಂಗ್‌ ಕಾಲೇಜಾಗಿ ಹೊಸ ಮೈಲಿಗಲ್ಲು ನಿರ್ಮಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃತಕ ಬುದ್ಧಿಮತ್ತೆಯನ್ನು ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಿ ನೋಡಬೇಕು, ಅದು ಮಾನವನನ್ನು ಬದಲಿಸುವ ತಂತ್ರಜ್ಞಾನವಲ್ಲ. ಮಾನವೀಯ ಸಾಮಾನ್ಯ ಜ್ಞಾನ ಮತ್ತು ಎಐ ಒಂದಾದಾಗ ವಿಶ್ವಕ್ಕೆ ಅತ್ಯುತ್ತಮ ಪರಿಹಾರಗಳನ್ನು ನೀಡಬಹುದು ಎಂದರು.ಎಐಇಟಿಯ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಐಬಿಎಂ ಇಂಡಿಯಾದ ಎಐ ತಜ್ಞ ಮನೋಜ್ ಬಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಎಐಇಟಿ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಐಬಿಎಂ ಸಾಫ್ಟ್ ವೇರ್ ಲ್ಯಾಬ್ಸ್ ಪ್ರತಿನಿಧಿಗಳು ಇದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ ಸ್ವಾಗತಿಸಿದರು. ರಕ್ಷಿತಾ ರೈ ನಿರೂಪಿಸಿದರು. ಸಂಪತ್ ಶೆಟ್ಟಿ ವಂದಿಸಿದರು.