ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ಇದೀಗ ಸರ್ಕಾರಿ ಶಾಲೆಗಳಿಗೂ ಕಾಲಿಡುತ್ತಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ಇದೀಗ ಸರ್ಕಾರಿ ಶಾಲೆಗಳಿಗೂ ಕಾಲಿಡುತ್ತಿದೆ. ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ಅಡಿಯಲ್ಲಿ ಶೀಘ್ರದಲ್ಲೇ ಎಐ ತರಗತಿ ಆರಂಭವಾಗಲಿದ್ದು, ಇದಕ್ಕಾಗಿ ಅಗತ್ಯವಿರುವ 1,642 ಎಐ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಪೂರ್ಣಗೊಳಿಸಿದೆ.
ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ಮೂಲಕ ಜಾರಿಯಾಗುತ್ತಿರುವ ಈ ಯೋಜನೆಯು ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನ ಜಗತ್ತಿಗೆ ಸಜ್ಜುಗೊಳಿಸುವ ಗುರಿ ಹೊಂದಿದೆ. ರಾಜ್ಯದ 1,180 ಹೊಸದಾಗಿ ಅನುಮೋದಿತ ಸರ್ಕಾರಿ ಪ್ರೌಢಶಾಲೆ, 2024-25 ಹಾಗೂ 2025-26ರಲ್ಲಿ ಅನುಮೋದನೆಗೊಂಡ 381 ಶಾಲೆ ಹಾಗೂ ಸಿಂಗಲ್ ಸೆಕ್ಟರ್ ಶಾಲೆ ಸೇರಿ ಒಟ್ಟು 1,642 ಶಾಲೆಗಳಲ್ಲಿ ಎಐ ವಿಷಯ ಪರಿಚಯಿಸಲಾಗುತ್ತಿದೆ. ಇದೇ ವೇಳೆ ಬ್ಯೂಟಿ ಆ್ಯಂಡ್ ವೆಲ್‌ನೆಸ್, ರಿಟೇಲ್ ಹಾಗೂ ಅಪೆರಲ್ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದ 81 ಶಾಲೆಗಳಲ್ಲಿ ಅವುಗಳ ಬದಲಿಗೆ ಎಐ ವಿಭಾಗ ಜಾರಿಗೊಳಿಸಲಾಗಿದೆ.ಅತಿಥಿ ಶಿಕ್ಷಕರ ನೇಮಕ:
ಪ್ರತಿ ಶಾಲೆಗೆ ಒಬ್ಬರಂತೆ ಎಐ ಅತಿಥಿ ಶಿಕ್ಷಕರನ್ನು (ತಿಂಗಳಿಗೆ ₹ 20 ಸಾವಿರ) ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ನೇತೃತ್ವದಲ್ಲಿ ಪಾರದರ್ಶಕವಾಗಿ ಆಯ್ಕೆ ನಡೆಸಲಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ವಿಶೇಷ ತರಬೇತಿ ನೀಡಿ ತರಗತಿ ಆರಂಭಿಸಲು ಸಿದ್ಧತೆ ಪೂರ್ಣಗೊಂಡಿದೆ.ವಿದ್ಯಾರ್ಥಿಗಳಿಗೆ ಕೌಶಲ:
ಈ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆಯ ಮೂಲಭೂತ ಅರಿವು, ಡಿಜಿಟಲ್ ಸಾಕ್ಷರತೆ, ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ಸೃಜನಶೀಲತೆ ಹಾಗೂ ಭವಿಷ್ಯದ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲಗಳು ಬೆಳೆಯಲಿವೆ. ವೈದ್ಯಕೀಯ, ಕೃಷಿ, ಕೈಗಾರಿಕೆ, ಬ್ಯಾಂಕಿಂಗ್ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಎಐ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲೇ ಈ ಶಿಕ್ಷಣ ನೀಡುವುದು ಕಾಲದ ಅಗತ್ಯವಾಗಿದೆ.ಯಾವೆಲ್ಲ ಶಾಲೆಗಳು ಆಯ್ಕೆ:
ಧಾರವಾಡ ಜಿಲ್ಲೆಯಲ್ಲೂ ಯೋಜನೆಗೆ ವೇಗ ಸಿಕ್ಕಿದ್ದು, 56 ಸರ್ಕಾರಿ ಪ್ರೌಢಶಾಲೆಗಳಿಗೆ ಎಐ ಅತಿಥಿ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಜಿಲ್ಲೆಯ ಸಂಶಿ, ಕುಸುಗಲ್ಲ, ಕೋಳಿವಾಡ, ನಲವಡಿ, ಚಿಕ್ಕಮಲ್ಲಿಗವಾಡ, ಕುರುವಿನಕೊಪ್ಪ, ಮಂಟೂರ, ಚಿಲಕವಾಡ, ಗಾಂಧಿನಗರ, ಕುರಡಿಕೇರಿ, ಗುಲಗಂಜಿಕೊಪ್ಪ, ರಾಯನಾಳ, ನರೇಂದ್ರ, ಹುಬ್ಬಳ್ಳಿ ನೇಕಾರ ನಗರ ಸೇರಿದಂತೆ ಹಲವು ಶಾಲೆಗಳು ಯೋಜನೆಯ ವ್ಯಾಪ್ತಿಗೆ ಬಂದಿವೆ.ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಅತ್ಯಾಧುನಿಕ ತಂತ್ರಜ್ಞಾನ ಶಿಕ್ಷಣದ ಅವಕಾಶ ಕಲ್ಪಿಸುವ ಈ ಯೋಜನೆ, ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳ ನಡುವಿನ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಜತೆಗೆ ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸುವ ನಿರೀಕ್ಷೆ ಮೂಡಿಸಿದೆ. ಆಗಸ್ಟ್ ತಿಂಗಳಲ್ಲೇ ತರಗತಿ ಪ್ರಾರಂಭ
ಈಗಾಗಲೇ ಜಿಲ್ಲೆಯ 56 ಪ್ರೌಢಶಾಲೆಗಳಲ್ಲಿ ಎಐ ಶಿಕ್ಷಣಕ್ಕೆ ಬೇಕಾದ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಮುಂದಿನ ಒಂದೆರಡು ವಾರಗಳಲ್ಲಿ ಮಕ್ಕಳಿಗೆ ಯಾವ ರೀತಿ ಎಐ ಶಿಕ್ಷಣ ಕಲಿಸಬೇಕು ಎಂಬುದರ ಕುರಿತು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ಆಗಸ್ಟ್ ತಿಂಗಳೊಳಗೆ ಆಯ್ಕೆಯಾದ ಎಲ್ಲ ಪ್ರೌಢಶಾಲೆಗಳಲ್ಲಿ ಎಐ ತರಗತಿ ಪ್ರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಪ್ರೌಢ ಶಿಕ್ಷಣ ಅಭಿಯಾನದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ "ಕನ್ನಡಪ್ರಭ "ಕ್ಕೆ ತಿಳಿಸಿದರು.