ಈ ಯುಗದ ದೊಡ್ಡ ಜ್ಞಾನಿ ಕೃತಕ ಬುದ್ಧಿಮತ್ತೆ(ಎಐ). ಅದು ತನ್ನಿಂದಲೂ ತಪ್ಪಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುವ ಮೂಲಕ ನಮಗೆ ವಿನಮ್ರತೆಯನ್ನು ಕಲಿಸಿಕೊಡುತ್ತದೆ ಎಂದು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಸತ್ಯಬೋಧ ಜೋಶಿ ಹೇಳಿದ್ದಾರೆ.

ಉಡುಪಿ: ಈ ಯುಗದ ದೊಡ್ಡ ಜ್ಞಾನಿ ಕೃತಕ ಬುದ್ಧಿಮತ್ತೆ(ಎಐ). ಅದು ತನ್ನಿಂದಲೂ ತಪ್ಪಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುವ ಮೂಲಕ ನಮಗೆ ವಿನಮ್ರತೆಯನ್ನು ಕಲಿಸಿಕೊಡುತ್ತದೆ ಎಂದು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಸತ್ಯಬೋಧ ಜೋಶಿ ಹೇಳಿದ್ದಾರೆ.ಅವರು ಬುಧವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆಯಂಗವಾಗಿ ಸುದ್ದಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ, ಡಿಜಿಟಲ್- ಎಐ ಅಡಕತ್ತರಿ ನಡುವೆ ಛಾಯಾಗ್ರಹಣ ವಿಷಯ ಕುರಿತು ಉಪನ್ಯಾಸ ನೀಡಿದರು.

ಸದ್ಯ ಫೋಟೋಗ್ರಫಿ ಕ್ಷೇತ್ರದಲ್ಲಿ ಎಐ ನಮಗೆ ಬಂಧನ ಎನಿಸಿದರೂ, ಅದನ್ನು ಸರಿಯಾಗಿ ಬಳಸಿಕೊಂಡರೇ ಅದು ನಂದನ ಆಗುವುದಕ್ಕೆ ಸಾಧ್ಯವಿದೆ. ಫೋಟೋಗ್ರಫಿಯಲ್ಲಿ ಬಂದಿರುವ ಹೊಸ ತಂತ್ರಜ್ಞಾನಗಳು ನಮಗೆ ನೈತಿಕತೆಯನ್ನು ಕಾಪಾಡುವ ಜವಾಬ್ದಾರಿ ನೀಡುತ್ತದೆ. ಇದೀಗ ಬಂದಿರುವ ಎಐ ಕೂಡ ನಮಗೆ ತನ್ನನ್ನು ಮೀರಿ ಇನ್ನೂ ಪ್ರಬುದ್ಧರಾಗುವಂತೆ ಸವಾಲು ಒಡ್ಡುತ್ತಿದೆ. ಎಐ 10 ಹೆಜ್ಜೆ ಮುಂದಿಟ್ಟರೆ ನಾವು 100 ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ ಎಂದವರು ಹೇಳಿದರು.

ಡಿಜಿಟಲ್ ತಂತ್ರಜ್ಞಾನವು ತಜ್ಞರ ಮತ್ತು ಸಾಮಾನ್ಯರ ನಡುವಿನ ಅಸಮಾನತೆಯನ್ನು ದೂರ ಮಾಡಿದೆ. ಕಬ್ಬಿಣದ ಕಡಲೆಯಾಗಿದ್ದ ಫೋಟೋಗ್ರಫಿ ಡಿಜಿಟಲ್ ತಂತ್ರಜ್ಞಾನದಿಂದ ಸರಳವಾಗಿದೆ, ಆದರೇ ಈ ಡಿಜಿಟಲ್ ತಂತ್ರಜ್ಞಾನದಿಂದ ನೈಜತೆಗೆ ಅಪಾಯವಾಗುವ ಸಾಧ್ಯತೆಯೂ ಇದೆ ಎಂದವರು ಎಚ್ಚರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ನಿರ್ದೇಶಕ ಭರತ್ ಕುಮಾರ್ ಮಾತನಾಡಿ, ಛಾಯಾಗ್ರ್ರಹಣ ಎಂಬುದು ಕಾಲಚಕ್ರವನ್ನು ಒಂದು ಕ್ಷಣ ತಡೆ ಹಿಡಿದು ನಿಲ್ಲಿಸುವ ಪ್ರಕ್ರಿಯೆ ಆಗಿದೆ. ಫೋಟೋಗ್ರಫಿ ಎಂದರೇ ಕತ್ತಲಿನಿಂದ ಬೆಳಕಿಗೆ ಬರುವ ಕ್ರಿಯೆಯಾಗಿದೆ. ಹೊಸ ತಂತ್ರಜ್ಞಾನಗಳು ಬಂದರೂ ಈ ಮೂಲತತ್ವ ಮಾತ್ರ ಬದಲಾಗಿಲ್ಲ ಎಂದರು.

ವೃತ್ತಿ ಸಂಹಿತೆ ಬೇಕು: ಫೋಟೋಗ್ರಫಿ ಹಾಗೂ ಪತ್ರಿಕೋದ್ಯಮಕ್ಕೆ ವೃತ್ತಿ ಸಂಹಿತೆ ಇದೆ. ಯಾವುದನ್ನು ಮಾಡಬೇಕು ,ಯಾವುದನ್ನು ಮಾಡಬಾರದು ಎಂಬ ಎಚ್ಚರ ಮನುಷ್ಯನಲ್ಲಿ ಇದೆಯೇ ಹೊರತು ಯಂತ್ರದಲ್ಲಿರುವುದಿಲ್ಲ. ಹಾಗಾಗಿ ಯಂತ್ರಗಳನ್ನು ಬಳಸುವವರೇ ವೃತ್ತಿ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ ಎಂದವರು ಸಲಹೆ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿ, ಅಜಿತ್ ಆರಾಡಿ ವಂದಿಸಿದರು.