ಸಾರಾಂಶ
ಕೃತಕ ಬುದ್ದಿಮತ್ತೆ (ಎಐ) ಮಾನವಕುಲಕ್ಕೆ ಪೂರಕವೇ ಹೊರತು ಮಾರಕವಲ್ಲ. ಇದರಿಂದ ಮತ್ತಷ್ಟು ಜ್ಞಾನಸಂಪಾದನೆ ಸಾಧ್ಯ. ಭವಿಷ್ಯದಲ್ಲಿ ಮತ್ತಷ್ಟು ಕ್ರಾಂತಿ ಸೃಷ್ಟಿಸಲಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೃತಕ ಬುದ್ದಿಮತ್ತೆ (ಎಐ) ಮಾನವಕುಲಕ್ಕೆ ಪೂರಕವೇ ಹೊರತು ಮಾರಕವಲ್ಲ. ಇದರಿಂದ ಮತ್ತಷ್ಟು ಜ್ಞಾನಸಂಪಾದನೆ ಸಾಧ್ಯ. ಭವಿಷ್ಯದಲ್ಲಿ ಮತ್ತಷ್ಟು ಕ್ರಾಂತಿ ಸೃಷ್ಟಿಸಲಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಆಯೋಜಿಸಿದ್ದ ‘ಡಿಜಿಟಲ್ ಲ್ಯಾಂಡ್‌ಸ್ಕೇಪ್ ಇನ್ ಲ್ರೈಬ್ರರಿ’ ಕುರಿತ 3 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಬೃಹತ್ ಕ್ರಾಂತಿ ತಂದಿದೆ. ಪುರಾತನ ಲಿಪಿಗಳು, ಗ್ರಂಥಗಳು, ಪುಸ್ತಕಗಳು ಮತ್ತು ಮಾಹಿತಿಗಳನ್ನು ಎಐ ಚಾಲಿತ ಸಾಧನಗಳನ್ನು ಬಳಸಿ ಪುನರ್‌ಸ್ಥಾಪಿಸಲಾಗುತ್ತಿದೆ. ಸ್ಮಾರ್ಟ್ ಗ್ರಂಥಾಲಯಗಳು ಹೆಚ್ಚಾಗುತ್ತಿದೆ. ಚಾಟ್ ಜಿಪಿಟಿ ಬೆರಳತುದಿಯಲ್ಲೆ ಎಲ್ಲದಕ್ಕೂ ಉತ್ತರಿಸುತ್ತದೆ. ಎಐ ವಿಶ್ವದ ಎಲ್ಲ ಭಾಷೆಗಳನ್ನು ಒಳಗೊಂಡಂತೆ 7000ಕ್ಕಿಂತ ಹೆಚ್ಚು ಪದಗಳನ್ನು ಹೊಂದಿದೆ. ಯಾವುದೇ ಪ್ರಶ್ನೆಗೆ ಕ್ಷಣಮಾತ್ರದಲ್ಲೇ ನಿಖರವಾದ ಉತ್ತರಗಳನ್ನು ನೀಡುತ್ತದೆ ಎಂದರು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿನ ಕೊಡುಗೆ ಮತ್ತು ಸಾಧನೆಗಳಿಗಾಗಿ ಇದೇ ವೇಳೆ ಪ್ರೊ.ಎಂ.ರಘುನಂದನ ಅವರಿಗೆ ಸೊಸೈಟ್ ಫಾರ್ ಲ್ರೈಬ್ರರಿ ಪ್ರೊಫೆಷನಲ್ಸ್ ವತಿಯಿಂದ ‘ರಿಸರ್ಚ್ ಎಕ್ಸಲೆನ್ಸಿ ಅವಾರ್ಡ್’ ಪ್ರದಾನ ಮಾಡಲಾಯಿತು. ಬೆಂಗಳೂರು ವಿವಿ ಕುಲಪತಿ ಡಾ.ಎಸ್.ಎಂ. ಜಯಕರ, ಕುಲಸಚಿವರು ಶೇಕ್ ಲತೀಫ್, ದಾವಣಗೆರೆ ವಿವಿ ಕುಲಪತಿ ಬಿ.ಡಿ.ಕುಂಬಾರ್, ಇನ್ಫ್‌ಲಿಬ್‌ನೆಟ್ ನಿರ್ದೇಶಕ ಡಾ.ದೇವಿಕಾ ಪಿ. ಮಾಡಳ್ಳಿ, ಪ್ರೊ.ಜೋಸೆಫ್ ಯಪ್, ಎಂ.ಪಿ.ಸಿಂಗ್ ಸೇರಿ ದೇಶದ 10ಕ್ಕೂ ಹೆಚ್ಚು ವಿವಿಗಳ ಗ್ರಂಥಪಾಲಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.