ಅಖಿಲ ಭಾರತ ಕರ್ಣಾಟಕ ಬ್ಯಾಂಕ್‌ ಎಂಪ್ಲಾಯಿಸ್‌ ಎಸೋಸಿಯೇಷನ್‌ (ಎಐಬಿಇಎ) ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ 26ನೇ ಅಖಿಲ ಭಾರತ ಸಮ್ಮೇಳನ ಮಂಗಳೂರಿನ ಸಂಘನಿಕೇತನದಲ್ಲಿ ಶನಿವಾರ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಖಿಲ ಭಾರತ ಕರ್ಣಾಟಕ ಬ್ಯಾಂಕ್‌ ಎಂಪ್ಲಾಯಿಸ್‌ ಎಸೋಸಿಯೇಷನ್‌ (ಎಐಬಿಇಎ) ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ 26ನೇ ಅಖಿಲ ಭಾರತ ಸಮ್ಮೇಳನ ಮಂಗಳೂರಿನ ಸಂಘನಿಕೇತನದಲ್ಲಿ ಶನಿವಾರ ಉದ್ಘಾಟನೆಗೊಂಡಿತು.ಸಮ್ಮೇಳನಕ್ಕೆ ಚಾಲನೆ ನೀಡಿದ ಎಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ವೆಂಕಟಾಚಲಂ ಮಾತನಾಡಿ, ಕರ್ಣಾಟಕ ಬ್ಯಾಂಕ್‌ ನೌಕರರ ಸಂಘವು ಬಲಾಢ್ಯವಾಗಿ ಬೆಳೆದು ನಿಂತಿರುವ ಜತೆಗೆ ನೌಕರರ ಕ್ಷೇಮಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತ ಬಂದಿರುವ ಬ್ಯಾಂಕ್‌ ನೌಕರರು ದೇಶದ ಪ್ರಗತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಬ್ಯಾಂಕ್‌ಗಳು ನೌಕರರ ಶೋಷಣೆಯನ್ನು ತಡೆಯಬೇಕು ಎಂದು ಒತ್ತಾಯಿಸಿದ ಅವರು, ಯಾವುದೇ ಅಭಿವೃದ್ಧಿಶೀಲ ರಾಷ್ಟ್ರದ ಅಭಿವೃದ್ಧಿಗೆ ಬ್ಯಾಂಕಿಂಗ್‌ ಬಹಳ ಮುಖ್ಯ. ಹಾಗಾಗಿ ನೌಕರರ ಹಿತಾಸಕ್ತಿಗಳನ್ನು ಬ್ಯಾಂಕ್‌ಗಳು ಕಾಪಾಡಬೇಕು ಎಂದರು.

ನಮ್ಮ ದೇಶ ಪ್ರಗತಿ ಹೊಂದುತ್ತಿದೆ ಎಂದು ಎಷ್ಟು ಹೇಳಿಕೊಂಡರೂ ಜಾಗತಿಕ ಹಸಿವು ಸೂಚ್ಯಂಕದಂತಹ ಅನೇಕ ಸೂಚ್ಯಂಕಗಳಲ್ಲಿ ಭಾರತ ಕೆಳಮಟ್ಟದಲ್ಲಿದೆ ಎಂದು ವೆಂಕಟಾಚಲಂ ಹೇಳಿದರು.ಕರ್ಣಾಟಕ ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಶ್ರೀಕೃಷ್ಣನ್‌ ಎಚ್‌., ಎಸೋಸಿಯೇಶನ್‌ನ ಜತೆ ಕಾರ್ಯದರ್ಶಿ ಎಂ. ಜಯಂತ್‌, ಕೆಬಿಒಒ ಪ್ರಧಾನ ಕಾರ್ಯದರ್ಶಿ ಸುರೇಶ ಹೆಗ್ಡೆ ಎಸ್‌., ಸಮ್ಮೇಳನ ಸಂಯೋಜಕ ಎ.ಆರ್‌.ಸುಜಿತ್‌ ರಾಜು, ಎಸೋಸಿಯೇಶನ್‌ ಅಧ್ಯಕ್ಷೆ ಪೂರ್ಣಿಮಾ ಪಿ. ರಾವ್‌, ಪ್ರಮುಖರಾದ ರಾಘವನ್‌, ಪಣೀಂದ್ರ ಕೆ.ಜಿ ಮತ್ತಿತರರು ಇದ್ದರು.ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವಿನ್ಸೆಂಟ್‌ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.