ಸಾರಾಂಶ
371(ಜೆ) ರ ದಶಮಾನೋತ್ಸವ, ರಾಜಕೀಯ ಜೀವನದ 50 ವರ್ಷ ಪೂರ್ಣವಾದ ಹಿನ್ನೆಲೆ ಸಮಾರಂಭ ಆಯೋಜನೆ. ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ.
ಕನ್ನಡಪ್ರಭ ವಾರ್ತೆ ಬೀದರ್
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಈ ಭಾಗಕ್ಕೆ ಕಲಂ 371(ಜೆ) ವಿಶೇಷ ಸ್ಥಾನಮಾನದ ಕಲ್ಪಿಸಿದವರಲ್ಲಿ ಪ್ರಮುಖ ಸ್ಥಾನ ವಹಿಸಿದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ನಡೆಯಲಿದೆ.ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ 371(ಜೆ) ದೊರೆತು 10 ವರ್ಷ ದಶಮಾನೋತ್ಸವ ನಿಮಿತ್ತ ನಡೆಯಲಿರುವ ಅಭಿನಂದನಾ ಸಮಾರಂಭಕ್ಕಾಗಿ ನೆಹರು ಕ್ರೀಡಾಂಗಣ ಅಲ್ಲದೇ ನಗರ ಎಲ್ಲ ರೀತಿಯ ಸಜ್ಜಾಗಿದ್ದು ಕಾಂಗ್ರೆಸ್ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆ.
ಮಲ್ಲಿಕಾರ್ಜುನ ಖರ್ಗೆ ವಿಶೇಷ ವಿಮಾನದ ಮೂಲಕ ಮಂಗಳವಾರ ಬೆಳಗ್ಗೆ 9.30 ಗಂಟೆಗೆ ದೆಹಲಿಯಿಂದ ಹೊರಟು ಬೆಳಗ್ಗೆ 11.30 ಗಂಟೆಗೆ ಬೀದರ್ ತಲುಪಲಿದ್ದಾರೆ. ನಂತರ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ಇಲ್ಲಿಂದ ನೆರವಾಗಿ ಕಲಬುರಗಿಗೆ ತೆರಳಿ ರಾತ್ರಿ ವಾತ್ಸವ್ಯ ಮಾಡುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭಕ್ಕೆ ಸುಮಾರು 50 ರಿಂದ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಜಿಲ್ಲೆಯ ಸುಪುತ್ರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೃಹತ್ ಅಭಿನಂದನಾ ಸಮಾರಂಭ ಜರುಗುತ್ತಿದೆ.
ಈ ಅಭಿನಂದನಾ ಸಮಾರಂಭವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಉದ್ಘಾಟಿಸುವರು. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಸಿದ್ರಾಮ ಶರಣ ಬೆಲ್ದಾಳ, ಅಣದೂರಿನ ವರಜ್ಯೋತಿ ಭಂತೆ, ಕ್ರೈಸ್ತ ಧರ್ಮಗುರು ನೆಲ್ಸನ್ ಸುಮಿತ್ರ, ಮುಸ್ಲಿಂ ಧರ್ಮಗುರು ಮೌಲಾನಾ ಮೌನಿಸ್ ಕಿರಮಾನಿ, ಸಿಖ್ ಧರ್ಮದ ಜ್ಞಾನಿ ದರಬಾರಾಸಿಂಗ್ ಸಾನ್ನಿಧ್ಯ ವಹಿಸುವರು.ಜಿಲ್ಲೆಯ ಸಚಿವರು, ಎಂಎಲ್ಸಿಗಳು ಮಾಜಿ ಶಾಸಕರು, ಪಕ್ಷದ ಹಿರಿಯ ಮುಖಂಡರು, ವಿವಿಧ ಚುನಾಯಿತ ಪ್ರತಿನಿಧಿಗಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರು ಅಲ್ಲದೇ ಅಭಿನಂದನಾ ಸಮಿತಿಯ ಪ್ರಮುಖರು ಭಾಗವಹಿಸಲಿದ್ದಾರೆ.