ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಚಾಲನೆ ನೀಡಿದರು.
ಕುಷ್ಟಗಿ: ಎಚ್‌ಐವಿ ಏಡ್ಸ್ ರೋಗವೂ ರೋಗಗಳ ಸರಮಾಲೆಯಾಗಿದ್ದು, ಈ ಕುರಿತು ಜಾಗೃತಿ ಬಹಳ ಅಗತ್ಯವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಎಲ್ಲ ಕಾಯಿಲೆಗಳಿಗಿಂತ ಏಡ್ಸ್ ಹೆಚ್ಚು ಮಾರಕ. ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯಾದಂತೆಲ್ಲ ಎಚ್‌ಐವಿ-ಏಡ್ಸ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಾಧಾನದ ಸಂಗತಿ. ಎಚ್‌ಐವಿ ಬಗ್ಗೆ ಎಚ್ಚರ ವಹಿಸಿ ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳಬೇಕು ಎನ್ನುವ ಸಲುವಾಗಿ ಈ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ಮಾತನಾಡಿ, ಎಚ್‌ಐವಿ-ಏಡ್ಸ್ ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಏಡ್ಸ್ ನಿಯಂತ್ರಣ ಸಾಧ್ಯ. ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡದಂತೆ ಗರ್ಭಿಣಿಯರಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.ಏಡ್ಸ್‌ಗೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ, ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಭಯಪಡುವ ಆತಂಕವಿಲ್ಲದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೊಂಕು ತಗುಲಿದ ರೋಗಿಯೂ ಔಷಧಿಯನ್ನು ಸರಿಯಾಗಿ ಸೇವಿಸಿದರೆ ಎಲ್ಲರಂತೆ ನೂರು ವರ್ಷ ಬದುಕಿ ಬಾಳಬಹುದು. ಒಬ್ಬರು ಉಪಯೋಗಿಸಿದ ಸಿರೆಂಜ್ (ಸೂಜಿ), ಹಚ್ಚೆ ಹಾಕಿಸಿಕೊಳ್ಳುವುದು ಮಾಡಬಾರದು, ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಬಾರದು. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ರೋಗಕ್ಕೆ ತುತ್ತಾಗುವ ಸಂಭವ ಇರುತ್ತದೆ ಎಂದು ಹೇಳಿದರು.
ಜಾಥಾದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್. ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಚನ್ನಬಸಪ್ಪ. ನಾಗರಾಜ್ ಹೀರಾ, ಅನಿಲಕುಮಾರ ಕರಡಿ, ಕಿರಣ್ ಬಡಿಗೇರ, ವಿನೋದ ಅರಹುಣಸಿ, ಪ್ರಕಾಶ ಗುತ್ತೇದಾರ ಇದ್ದರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಜನ ಜಾಗೃತಿ ಜಾಥಾ ನಡೆಯಿತು.20 ಪಾಸಿಟಿವ್ ಪ್ರಕರಣ: ಕುಷ್ಟಗಿ ಆಸ್ಪತ್ರೆಯಲ್ಲಿ ಒಟ್ಟು 4860 ಪರೀಕ್ಷೆ ಮಾಡಿರುವ ಪೈಕಿ 20 ಎಚ್‌ಐವಿ ಪಾಸಿಟಿವ್ ಕೇಸುಗಳು ಇವೆ. ಕಳೆದ ಎರಡು ದಶಕಗಳ ಹಿಂದೆ ಎಚ್ಐವಿ ಪಾಸಿಟಿವ್ ರೇಟ್ ಶೇ. 9.9 ಇತ್ತು, ಆದರೆ 2025 ನವಂಬರ್ ತಿಂಗಳಿಗೆ ಶೇ. 0.2 ಇದ್ದು, ಅದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಜಾಗೃತಿ ಹಮ್ಮಿಕೊಂಡಿದೆ ಎಂದು ಕುಷ್ಟಗಿ ಟಿಎಚ್ಒ ಡಾ. ಆನಂದ ಗೋಟೂರು ಹೇಳಿದರು.