ಎಐಡಿಎಸ್‌ಒ ೭೦ನೇ ಸಂಸ್ಥಾಪನ ದಿನಾಚರಣೆ

| Published : Dec 30 2024, 01:01 AM IST

ಸಾರಾಂಶ

ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ಕಳೆದ ೭೦ ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಉಳಿಸಲು ನಿರಂತರವಾಗಿ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧ ರಾಜಿರಹಿತ ಹೋರಾಟವನ್ನು ಸಂಘಟಿಸುತ್ತಾ ಬಂದಿದೆ. ವಿದ್ಯಾರ್ಥಿಗಳ ಹೋರಾಟದಿಂದಾಗಿ ಹಲವಾರು ನ್ಯಾಯಯುತ ಬೇಡಿಕೆಗಳು ಈಡೇರಿದೆ ಎಂದು ಎ.ಐ.ಡಿ.ಎಸ್.ಒ. ರಾಜ್ಯ ಖಜಾಂಚಿ ಸುಭಾಷ್ ಹೇಳಿದರು. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ದೊರೆಯಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಕ್ಷಣ-ಸಂಸ್ಕೃತಿ-ಮಾನವತೆ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ೭೦ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ನಗರದ ಹೇಮಾವತಿ ಪ್ರತಿಮೆ ಮುಂಭಾಗದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಎ.ಐ.ಡಿ.ಎಸ್.ಒ. ರಾಜ್ಯ ಖಜಾಂಚಿ ಸುಭಾಷ್ ಮಾತನಾಡಿ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ಕಳೆದ ೭೦ ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಉಳಿಸಲು ನಿರಂತರವಾಗಿ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧ ರಾಜಿರಹಿತ ಹೋರಾಟವನ್ನು ಸಂಘಟಿಸುತ್ತಾ ಬಂದಿದೆ. ವಿದ್ಯಾರ್ಥಿಗಳ ಹೋರಾಟದಿಂದಾಗಿ ಹಲವಾರು ನ್ಯಾಯಯುತ ಬೇಡಿಕೆಗಳು ಈಡೇರಿದೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ದೊರೆಯಬೇಕು. ಹಾಗೆ ಪಡೆಯುವ ಶಿಕ್ಷಣವು ಧರ್ಮನಿರಪೇಕ್ಷ -ವೈಜ್ಞಾನಿಕ- ಪ್ರಜಾತಾಂತ್ರಿಕವಾಗಿ ಇರಬೇಕು ಎಂಬ ಮಹಾನ್ ಧ್ಯೇಯದೊಂದಿಗೆ ಎಐಡಿಎಸ್‌ಒ ಇಂದು ಎಲ್ಲಾ ರಾಜ್ಯಗಳಲ್ಲಿ ನಿರಂತರವಾಗಿ ಮುನ್ನಡೆಯುತ್ತಿದೆ ಹಾಗೂ ಸಕ್ರಿಯವಾಗಿ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದೆ. ಸಂಘಟನೆಯ ಕರೆಗೆ ಓಗೊಟ್ಟು ಲಕ್ಷಾಂತರ ವಿದ್ಯಾರ್ಥಿಗಳು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಸದಸ್ಯತ್ವವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.

ನಮ್ಮ ಸಮಾಜವು ಇಂದು ಅತ್ಯಂತ ತೀವ್ರ ಸಾಂಸ್ಕೃತಿಕ ಬಿಕಟ್ಟನ್ನು ಎದುರಿಸುತ್ತಿದೆ, ಉನ್ನತ ನೀತಿ ನೈತಿಕತೆ ಕುಸಿದಿದೆ, ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ, ಇವೆಲ್ಲವೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿವೆ. ಈ ಸಾಂಸ್ಕೃತಿಕ ಅಧಃಪತನದ ಮಹಾಮಾರಿಯ ವಿರುದ್ಧ ಸಮರ ಸಾರಿ ನೇತಾಜಿ-ಭಗತ್ ಸಿಂಗರಂತಹ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯದ ಹರಿಕಾರರ ಉನ್ನತ ಚಿಂತನೆಗಳನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಎಲ್ಲೆಡೆ ಹರಡುತ್ತಿದೆ. ಶಿಕ್ಷಣ- ಮಾನವತೆ- ಸಂಸ್ಕೃತಿ ಉಳಿಸಲು ಮತ್ತು ಶಿಕ್ಷಣದ ವ್ಯಾಪಾರೀಕರಣ, ಹಸಿವು, ಬಡತನ, ನಿರುದ್ಯೋಗ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿಪಡೆದು ಮುಂಬನ್ನಿ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಚೈತ್ರಾ, ಪದಾಧಿಕಾರಿಗಳಾದ ಸುಷ್ಮಾ, ಮಮತಾ, ಪುರುಷೋತ್ತಮ್, ಶ್ಯಾಮಲಾ, ಧನುಶ್ರೀ, ಜಯಂತ್, ಮಹಾಂತೇಶ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.