ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಖಾತ್ರಿಪಡಿಸಲು ಆಗ್ರಹಿಸಿ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶಶಿಕಲಾ ಮೇಟಿ ಮಾತನಾಡಿ, ಸರಿಯಾಗಿ ಮಳೆ ಇರದೆ, ಕೈತುಂಬ ಸಂಬಳ ಸಿಗದೆ ಜಿಲ್ಲೆಯ ರೈತ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಏರಿಕೆ ಜನರ ಜೀವನವನ್ನು ಇನ್ನಷ್ಟು ದುಸ್ತರಗೊಳಿಸಿದೆ. ಶಿಕ್ಷಣದ ಶುಲ್ಕಗಳು ಗಗನಕ್ಕೇರಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಸೌಲಭ್ಯಗಳನ್ನು ಹೆಚ್ಚಿಸಬೇಕಿದ್ದ ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸುತ್ತಿದೆ. ಪಿಯು, ಡಿಗ್ರಿ, ಡಿಪ್ಲೋಮಾ ಸೇರಿದಂತೆ ಹಲವಾರು ಕೋರ್ಸ್‌ಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗ ಸೇರಿದಂತೆ ವಿವಿಧ ಸಮುದಾಯಗಳ ವಿದ್ಯಾರ್ಥಿಗಳಿಗೆ ದೊರೆಯಬೇಕಿದ್ದ ಕಳೆದ ವರ್ಷದ ವಿದ್ಯಾರ್ಥಿ ವೇತನ ಇನ್ನೂ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಾಕಷ್ಟು ತಾಂತ್ರಿಕ ದೋಷಗಳಿಂದ ಕೂಡಿದ್ದು, ಎಷ್ಟೋ ವಿದ್ಯಾರ್ಥಿಗಳ ಅರ್ಜಿ ಸ್ವಿಕೃತವಾಗದೆ ದಿಕ್ಕು ತೋಚದ ಪರಿಸ್ಥಿತಿಗೆ ವಿದ್ಯಾರ್ಥಿಗಳು ತಳಲ್ಪಟ್ಟಿದ್ದಾರೆ. ಇದಷ್ಟೇ ಅಲ್ಲದೆ, ಗಾಯದ ಮೇಲೆ ಬರೆ ಎಳೆದಂತೆ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಲ್ಲಬೇಕೆಂದು ಶಿಷ್ಯವೇತನದ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ₹5 ಸಾವಿರದಿಂದ ₹60 ಸಾವಿರ ವರೆಗೆ ವಿತರಿಸಲ್ಪಡುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು ₹1100 ರಿಂದ ₹11,000ಕ್ಕೆ ಇಳಿಸಲಾಗಿದೆ. ಜನಸಾಮಾನ್ಯರಿಂದ ಸಂಗ್ರಹವಾಗಿರುವ ತೆರಿಗೆ ದುಡ್ಡನ್ನು ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರ ವಿನಿಯೋಗಿಸಬೇಕು. ಸೆಸ್ ಹೆಸರಲ್ಲಿ ಸಂಗ್ರಹವಾಗುತ್ತಿರುವ ಹಣ ಕಾರ್ಮಿಕ ನಿಧಿಯಲ್ಲಿ ಹೇರಳವಾಗಿ ಶೇಖರಣೆಯಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಅವರ ಏಳಿಗೆಗೆ ಬಳಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಾರ್ಯದರ್ಶಿ ಸಿಂಧು ಕೌದಿ ಕಾರ್ಯಕರ್ತರಾದ ಸ್ಪೂರ್ತಿ, ಹರ್ಷಿತ ಹಾಗೂ ವಿದ್ಯಾರ್ಥಿಗಳಿದ್ದರು.