ನ.27ರಿಂದ ದೆಹಲಿಯಲ್ಲಿ ಎಐಡಿಎಸ್‌ಒ 10ನೇ ಅಖಿಲ ಭಾರತ ಸಮ್ಮೇಳನ

| Published : Nov 23 2024, 12:35 AM IST

ಸಾರಾಂಶ

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ಆಶಯಗಳ ಹೊತ್ತು ಸಕ್ರಿಯವಾಗಿ ವಿದ್ಯಾರ್ಥಿಗಳ ನಡುವೆ ಕಾರ್ಯನಿರ್ವಹಿಸುತ್ತಿದೆ.

ಬಳ್ಳಾರಿ: ಶಿಕ್ಷಣ-ಸಮಾನತೆ-ಸಂಸ್ಕೃತಿ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ನ.27, 28, 29ರಂದು ದೇಶದ ರಾಜಧಾನಿ ದೆಹಲಿಯಲ್ಲಿ ಎಐಡಿಎಸ್‌ಒ ಸಂಘಟನೆಯ 10ನೇ ಅಖಿಲ ಭಾರತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಶೈಕ್ಷಣಿಕ ಸುಧಾರಣೆಗಾಗಿ ನಿರಂತರ ಚಳವಳಿ ಕಟ್ಟುತ್ತಿರುವ ಎಐಡಿಎಸ್‌ಒ ಸಂಘಟನೆ ರಾಜ್ಯದ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ಆಶಯಗಳ ಹೊತ್ತು ಸಕ್ರಿಯವಾಗಿ ವಿದ್ಯಾರ್ಥಿಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಶೈಕ್ಷಣಿಕ ವ್ಯವಸ್ಥೆ ಬಲಗೊಳ್ಳಬೇಕು. ಬಡವರಿಗೂ ಗುಣಮಟ್ಟದ ಉನ್ನತ ಶಿಕ್ಷಣ ದಕ್ಕಬೇಕು ಎಂಬ ಉದ್ದೇಶದಿಂದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ವಿದ್ಯಾರ್ಥಿ ಸಮುದಾಯವನ್ನು ಗಟ್ಟಿಗೊಳಿಸುವ ಕೆಲಸವನ್ನು ಎಐಡಿಎಸ್‌ಒ ಸಂಘಟನೆ ಮಾಡುತ್ತಿದ್ದು, ವಿದ್ಯಾರ್ಥಿ ಹೋರಾಟವನ್ನು ಮತ್ತಷ್ಟೂ ಗಟ್ಟಿಗೊಳಿಸುವ ದಿಸೆಯಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರಮಟ್ಟದಲ್ಲಾಗುತ್ತಿರುವ ಶೈಕ್ಷಣಿಕ ವಲಯದ ಬೆಳವಣಿಗೆಗಳು, ಕೇಂದ್ರ ಸರ್ಕಾರ ರೂಪಿಸಿರುವ ಶಿಕ್ಷಣ ನೀತಿಯ ಅಪಾಯಗಳು, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳು ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ದೇಶದ ನಾನಾ ರಾಜ್ಯಗಳಿಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಮೊದಲ ದಿನ ವಿದ್ಯಾರ್ಥಿಗಳ ಬೃಹತ್

ಮೆರವಣಿಗೆ ಹಾಗೂ ಉದ್ಘಾಟನಾ ಸಮಾರಂಭ ಜರುಗಲಿದ್ದು, ಬಳಿಕ ಎರಡು ದಿನಗಳ ಕಾಲ ಪ್ರತಿನಿಧಿ ಅಧಿವೇಶನ ನಡೆಯಲಿದೆ. ಸಮ್ಮೇಳನದ ಕೊನೆಯ ದಿನದಲ್ಲಿ ಮುಂದಿನ ಹಂತದ ಹೋರಾಟಗಳ ರೂಪುರೇಷಗಳ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಎಲ್ಲ ಹಂತದಲ್ಲಿ ಏರಿಕೆಯಾಗಿರುವ ಶಿಕ್ಷಣ ಶುಲ್ಕವನ್ನು ತಡೆಗಟ್ಟಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು. ಮುಚ್ಚಿದ ಶಾಲೆಗಳನ್ನು ಮತ್ತೆ ಪುನರಾರಂಭಿಸಬೇಕು. ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣ ನಿಲ್ಲಿಸಬೇಕು. ಸರ್ಕಾರದ ಎಲ್ಲ ಉದ್ಯೋಗಗಳನ್ನು ಖಾತ್ರಿಪಡಿಸಬೇಕು ಎಂಬುದು ಸೇರಿದಂತೆ ಕರ್ನಾಟಕ ಶೈಕ್ಷಣಿಕ ಸಮಸ್ಯೆಗಳ ಕುರಿತು ಸಹ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಸಮ್ಮೇಳನದಲ್ಲಿ ಅನೇಕ ರಾಷ್ಟ್ರಮಟ್ಟದ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಹಾಗೂ ಬುದ್ಧಿಜೀವಿಗಳು ಭಾಗವಹಿಸುವರು. ದೇಶದಲ್ಲಿನ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತು ಶಿಕ್ಷಣ ತಜ್ಞರು ಸಮ್ಮೇಳನದಲ್ಲಿ ಮಾತನಾಡುವರು.

ಸಾಮಾಜಿಕ ಹೋರಾಟಗಾರರು ಮುಂದಿನ ಚಳುವಳಿಯನ್ನು ಕಟ್ಟಲು ಬೇಕಾದ ತಯಾರಿ ಕುರಿತು ಸಲಹೆಗಳನ್ನು ನೀಡುವರು ಎಂದು ವಿವರಿಸಿದರು.

ಸಂಘಟನೆಯ ಉಪಾಧ್ಯಕ್ಷೆ ಶಾಂತಿ, ಉಮಾದೇವಿ, ಪ್ರಮೋದ್, ಅನುಪಮಾ ಸುದ್ದಿಗೋಷ್ಠಿಯಲ್ಲಿದ್ದರು.