ಸಾರಾಂಶ
ನಿರುದ್ಯೋಗ ಮತ್ತು ನೇಮಕಾತಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಐಡಿವೈಓ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು.
ಚಿತ್ರದುರ್ಗ: ನಿರುದ್ಯೋಗ ಮತ್ತು ನೇಮಕಾತಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಶನಿವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಚಿತ್ರದುರ್ಗ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಯುವಜನರು ಇಂದು ನಿರುದ್ಯೋಗದ ಸುಳಿಯಲ್ಲಿ ಸಿಲುಕಿದ್ದಾರೆ. ಅಕ್ಟೋಬರ್ 2023ರ ವೇಳೆಗೆ ದೇಶದಲ್ಲಿ ನಿರುದ್ಯೋಗದ ದರವು ಶೇ.10.04ನ್ನು ತಲುಪಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‍ಡಿಎ ಹಾಗೂ ರಾಜ್ಯಗಳಲ್ಲಿ, ರಾಷ್ಟ್ರೀಯ ಪಕ್ಷಗಳಾಗಲಿ ಅಥವಾ ಯಾವುದೇ ಪ್ರಾದೇಶಿಕ ಪಕ್ಷಗಳಾಗಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಜಾರಿಗೆ ತರುವ ಕಾರ್ಪೊರೇಟ್ ಪರ, ಬಂಡಾವಾಳ ಶಾಹಿಗಳ ಪರವಾದ ನೀತಿಗಳಿಂದಾಗಿ ನಿರುದ್ಯೋಗ ಸಮಸ್ಯೆ ಭೀಕರವಾಗಿ ಉಲ್ಬಣಗೊಳ್ಳುತ್ತಿದೆ ಎಂದು ದೂರಿದ್ದಾರೆ.ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 9.64 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. 2010ರಲ್ಲಿ ದೇಶದ ಅತಿದೊಡ್ಡ ಉದ್ಯೋಗಧಾರಿತ ಭಾರತೀಯ ರೆಲ್ವೇ 22 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. ಇಂದು ಅಲ್ಲಿ ಕೇವಲ 12.23 ಲಕ್ಷ ಮಂದಿ ಇದ್ದಾರೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಕೆಪಿಎಸ್ಸಿಯನ್ನು ಭ್ರಷ್ಟಾಚಾರದಿಂದ ಸ್ವಚ್ಛಗೊಳಿಸಲು ಹೂಟಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಿ. ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಹಗರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಹಾಗೂ ಮರುಪರೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿಬೇಕು ನೇಮಕಾತಿ ಅರ್ಜಿ ಶುಲ್ಕಗಳನ್ನು ಕೈಬಿಡಿ ಹಾಗೂ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳನ್ನು ಬರೆಯಲು ಮತ್ತು ಸಂದರ್ಶನದಲ್ಲಿ ಭಾಗವಹಿಸಲು ಬೇರೆ ಊರುಗಳಿಗೆ ಓಡಾಡುವ ಯುವಜನರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿ ಬೇಕು. ಗ್ರಂಥಪಾಲಕರು, ಪ್ರವಾಸಿ ತಾಣಗಳಲ್ಲಿನ ಗೈಡ್ಗಳು, ಪಶುಸಖ, ಅರಣ್ಯ ಸಂರಕ್ಷಕರು, ಮೃಗಾಲಯ ಕಾರ್ಮಿಕರು ಇನ್ನಿತರ ಸ್ಕಿಮ್ ವರ್ಕರ್‍ಗಳಿಗೆ ಉದ್ಯೋಗ ಭದ್ರತೆ ನೀಡಿ, ಖಾಯಂಗೊಳಿಸಿ ಎಂದು ಆಗ್ರಹಿಸಲಾಯಿತು.