ಸಾರಾಂಶ
ಹೊಸಪೇಟೆ: ಬಳ್ಳಾರಿಯ ತೋರಣಗಲ್ಲಿನಲ್ಲಿ ಐದು ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನಗರದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೆಷನ್ (ಎಐಡಿವೈಒ), ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಸ್ಎಸ್), ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಜಂಟಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಡಾ. ಪುನೀತ್ ರಾಜಕುಮಾರ್ ವೃತ್ತದವರೆಗೆ ಸಾಗಿ ತಹಸಿಲ್ ಕಚೇರಿ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಎಐಎಂಸ್ಎಸ್ ಸಂಟನೆಯ ರಾಜ್ಯ ಖಜಾಂಚಿ ಈಶ್ವರಿ ಕೆ.ಎಂ. ಮಾತನಾಡಿ, ಸರ್ಕಾರದ ಅಂಗ ಸಂಸ್ಥೆಯಾದ ನ್ಯಾಷನಲ್ ಕ್ರೈಮ್ ರಿಪೋರ್ಟ್ ಬ್ಯೂರೋ ಸಮೀಕ್ಷೆಯ ಪ್ರಕಾರ ಪ್ರತಿ 11 ನಿಮಿಷಕ್ಕೊಮ್ಮೆ ದೇಶದಲ್ಲಿ ಅತ್ಯಾಚಾರ ಘಟನೆ ಜರಗುತ್ತಿದೆ. ಆದರೂ ಸರ್ಕಾರಗಳು ಅತ್ಯಾಚಾರ ತಡೆಗಟ್ಟಲು ಗಂಭೀರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅತ್ಯಾಚಾರಕ್ಕೆ ಪ್ರೇರೆಪಿಸುತ್ತಿರುವ ಅಶ್ಲೀಲತೆ, ಮದ್ಯ, ಮಾದಕ ವಸ್ತುಗಳನ್ನೂ ತಡೆಗಟ್ಟುವ ಬದಲಾಗಿ ಬಂಡವಾಳವನ್ನಾಗಿಸಿಕೊಂಡು ಯುವಜನತೆಯ ನೈತಿಕತೆಯನ್ನು ಮುರಿಯುತ್ತಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಾಗ ಇಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಬೃಹತ್ ಸಂಖ್ಯೆಯಲ್ಲಿ ಜನತೆ ಹೋರಾಟಕ್ಕೆ ಮುಂದಾಗಬೇಕು. ಆಗ ಮಾತ್ರ ನಾವು ಸ್ವಾಸ್ಥ್ಯ ಹಾಗೂ ನಾಗರಿಕ ಸಮಾಜ ಎನಿಸಿಕೊಳ್ಳಲು ಸಾಧ್ಯ. ಆಟವಾಡುವ ಹಸುಳೆಯ ಮೇಲೆ ಅತ್ಯಾಚಾರ ನಡೆಸುವುದು ಇದ್ಯಾವ ರೀತಿಯಲ್ಲಿ ನಾಗರಿಕ ಸಮಾಜ ಎನಿಸಿಕೊಳ್ಳುತ್ತದೆ? ಎಂದು ಪ್ರಶ್ನಿಸಿದರು.
ಎಐಡಿವೈಒ ಜಿಲ್ಲಾ ಸಮಿತಿ ಸದಸ್ಯ ಪ್ರಕಾಶ್ ನಾಯಕ್ ಮಾತನಾಡಿ, ಲಾಭದ ಬೆನ್ನು ಹತ್ತಿರುವ ಬಂಡವಾಳಶಾಹಿ ಸಮಾಜದಲ್ಲಿ ಉನ್ನತ ನೀತಿ, ನೈತಿಕತೆ, ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ನಾವು ಮಹಾನ್ ವ್ಯಕ್ತಿಗಳಾದ ಭಗತ್ ಸಿಂಗ್, ನೇತಾಜಿ, ಆಜಾದ್, ಫುಲೇ ದಂಪತಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.ಎಐಡಿವೈಒ ಜಿಲ್ಲಾ ಸಮಿತಿ ಸದಸ್ಯ ಪಾಲಾಕ್ಷ ಮಾತನಾಡಿ, ಅತ್ಯಾಚಾರಕ್ಕೆ ಒಳಗಾದ ಕಂದಮ್ಮಳ ಭವಿಷ್ಯದ ಎಲ್ಲ ರೀತಿಯ ಜವಾಬ್ದಾರಿಗಳನ್ನು ಸರ್ಕಾರ ವಹಿಸಿಕೊಳ್ಳಬೇಕು. ಅಪರಾಧಿಗೆ ತ್ವರಿತ ನ್ಯಾಯಾಲಯದ ಮೂಲಕ ತಕ್ಷಣವೇ ಶಿಕ್ಷೆಗೆ ಗುರಿಪಡಿಸಬೇಕು. ಮದ್ಯ ಮಾದಕ ವಸ್ತುಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಎಐಡಿವೈಒ ಯುವಜನ ಸಂಘಟನೆಯ ಕಾರ್ಯದರ್ಶಿ ಪಂಪಾಪತಿ, ಜಿಲ್ಲಾ ಸಮಿತಿ ಸದಸ್ಯರಾದ ಸಮೀರ್, ಅಭಿಷೇಕ್ ಕಾಳೆ, ಎಐಎಮ್ಎಸ್ಎಸ್ ಮಹಿಳಾ ಸಂಘಟನೆಯ ಕಾರ್ಯದರ್ಶಿ ಮಂಜುಳಾ, ಜಿಲ್ಲಾ ಸಮಿತಿ ಸದಸ್ಯರಾದ ಮಹೇಶ್ವರಿ, ಯಶೋಧಮ್ಮ, ಮಾನಸಾ, ಹುಲಿಗೆಮ್ಮ, ಜ್ಯೋತಿ ಮತ್ತಿತರರಿದ್ದರು.