ವರ್ಷ ಕಳೆದರೂ ಸಂಚಾರಕ್ಕೆ ಮುಕ್ತವಾಗದ ಐಗಳಿ- ಬಡಚಿ ರಸ್ತೆ

| Published : Mar 26 2024, 01:00 AM IST

ಸಾರಾಂಶ

ಐಗಳಿ: ತಾಲೂಕಿನ ಐಗಳಿ ಗ್ರಾಮದಿಂದ ಬಡಚಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ, ಆಮೆಗತಿಯಲ್ಲಿ ಮತ್ತು ತೀರಾ ಕಳಪೆ ಮಟ್ಟದಿಂದ ನಿರ್ಮಾಣ ಮಾಡುತ್ತಿರುವ ಈ ರಸ್ತೆಯನ್ನು ಬೇಗನೆ ಅಭಿವೃದ್ಧಿಗೊಳಿಸುವುದರ ಜೊತೆಗೆ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ತಾಲೂಕು ಆಡಳಿತ ನಿರ್ಲಕ್ಷ್ಯ ಧೋರಣೆ ತೋರಿದರೇ ಬರುವ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ಐಗಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ದೇವೇಂದ್ರ ಬೆಳಗಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ ತಾಲೂಕಿನ ಐಗಳಿ ಗ್ರಾಮದಿಂದ ಬಡಚಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ, ಆಮೆಗತಿಯಲ್ಲಿ ಮತ್ತು ತೀರಾ ಕಳಪೆ ಮಟ್ಟದಿಂದ ನಿರ್ಮಾಣ ಮಾಡುತ್ತಿರುವ ಈ ರಸ್ತೆಯನ್ನು ಬೇಗನೆ ಅಭಿವೃದ್ಧಿಗೊಳಿಸುವುದರ ಜೊತೆಗೆ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ತಾಲೂಕು ಆಡಳಿತ ನಿರ್ಲಕ್ಷ್ಯ ಧೋರಣೆ ತೋರಿದರೇ ಬರುವ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ಐಗಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ದೇವೇಂದ್ರ ಬೆಳಗಲಿ ಹೇಳಿದರು.

ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷಗಳ ಹಿಂದೆ ಅಂದರೇ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಇಂದಿನ ಶಾಸಕರಾಗಿರುವ ಲಕ್ಷ್ಮಣ ಸವದಿ ಅವರು ಈ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಈ ರಸ್ತೆ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಈ ಕಾಮಗಾರಿ ಇನ್ನುವರೆಗೆ ಪೂರ್ಣಗೊಳ್ಳದೇ ಆಮೆಯ ಗತಿಯಲ್ಲಿ ಕುಂಟುತ್ತ ಸಾಗಿದೆ. ಈ ರಸ್ತೆಯನ್ನು ಅಲ್ಲಲ್ಲಿ ಅಗೆದು ಜೆಲ್ಲಿ ಕಲ್ಲು ಹಾಕಿ ಒಂದಿಷ್ಟು ಗರಸ, ಮಣ್ಣು ಹಾಕಿದ ಸಮಾಧಾನ ಬಿಟ್ಟರೇ ಉಳಿದ ಕಾಮಗಾರಿ ಇನ್ನೂ ಅಪೂರ್ಣವಾಗಿದೆ ಎಂದು ಆರೋಪಿಸಿದರು.

ಐಗಳಿ ಗ್ರಾಮದಿಂದ ಬಡಚಿ ಗ್ರಾಮದವರೆಗಿನ ಈ ರಸ್ತೆಗೆ ಮಹಾವೀರ ತೋಟ, ಭಜಂತ್ರಿ ವಸ್ತಿ, ಯಲ್ಲಡಗಿ ಗ್ರಾಮದ ಬೋಸ್ಲೆವಾಡಿ, ದಾಸರ ವಸತಿ ತೋಟದ ಸಂಪರ್ಕ ಹೊಂದಿರುವ 15 ಕಿಮೀ ದೂರದ ಈ ರಸ್ತೆಯಿಂದಲೇ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಐಗಳಿ ಗ್ರಾಮಸ್ಥರಿಗೆ ಈ ರಸ್ತೆ ಸಂಪರ್ಕವೇ ಸರಳ ಹಾಗೂ ಸಮೀಪ ಆಗಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕೂಡ ಸೈಕಲ್ ತುಳಿಯುತ್ತ ಇದೇ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯತೆ ಇದೆ. ಜಿಲ್ಲೆ ಕಲ್ಲುಗಳನ್ನು ಹರಡಿ ಹಾಗೆ ಬಿಟ್ಟಿರುವುದರಿಂದ ಅನೇಕ ಬಾರಿ ವಾಹನ ಅಪಘಾತಗಳು ಕೂಡ ಸಂಭವಿಸಿವೆ. ಈಗ ಬೇಸಿಗೆ ಸಮಯ ಕುಡಿಯುವ ನೀರಿಗಾಗಿ ಇದೇ ಮಾರ್ಗವಾಗಿ ಒಲಿದಾಡುವ ದುಸ್ಥಿತಿ ಬಂದಿದೆ. ನಿತ್ಯ ನರಕಯಾತನೆ ಅನುಭವಿಸುತ್ತಿಸರುವ ಈ ರಸ್ತೆ ಭಾಗದ ಜನರಿಗೆ ಕೂಡಲೇ ಬೇಗನೆ ರಸ್ತೆ ನಿರ್ಮಿಸಿ ಕೊಡಬೇಕು. ಇಲ್ಲವಾದರೇ ಮೇ.7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಈಶ್ವರ ಭಜಂತ್ರಿ, ಗಿರಮಲ್ಲ ಬಿರಾದಾರ, ರಾಯಪ್ಪ ತೆಲಸoಗ, ಭೀಮಗೊಂಡ ಬಿರಾದಾರ, ದಿಲೀಪ ಸಾಳುಂಕೆ, ರಮೇಶ ಬಿರಾದಾರ, ರಾಹುಲ ಬೋರಾಡೆ, ನಾರಾಯಣ ಶಿಂಧೆ, ಅಭಾ ಭೋಸಲೆ, ಶ್ರೀಶೈಲ ಮಗದುಮ್ಮ, ಗಣಪತಿ ಮಗದುಮ್ಮ, ಬಾಳು ಭೋಸಲೆ, ನಾರಾಯಣ ಚವ್ಹಾಣ, ನೇತಾಜಿ ಬೋರಾಡೆ, ಶಾಜಿ ಸಾಳುಂಕೆ, ಅಪ್ಪು ಸಾಳುಂಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕೋಟ್‌...

ರಸ್ತೆ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಗುತ್ತಿಗೆದಾರನಿಗೆ ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇವೆ. ತಾಂತ್ರಿಕ ಸಮಸ್ಯೆಯಿಂದ ಗುತ್ತಿಗೆದಾರನಿಗೆ ಸರ್ಕಾರದಿಂದ ಬರಬೇಕಾದ ಬಿಲ್ ವಿಳಂಬವಾಗಿದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮತ್ತೊಮ್ಮೆ ಸೂಚನೆ ನೀಡುತ್ತೇವೆ.

- ರಣ್ಣ ವಾಲಿ, ಸಹಾಯಕ ಅಭಿಯಂತರ, ಜಿಪo ಇಂಜಿನಿಯರಿಂಗ್ ವಿಭಾಗ ಅಥಣಿ.