900 ನೇ ದಿನ ಪೂರೈಸಿದ ಏಮ್ಸ್‌ ಹೋರಾಟ

| Published : Oct 29 2024, 12:50 AM IST

ಸಾರಾಂಶ

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ರಾಯಚೂರಿನಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆಪಾದಿಸಿದ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಪ್ರಧಾನಮಂತ್ರಿಗೆ ಪತ್ರ ಬರೆದು ಒಕ್ಕೊರಲ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 900 ನೇ ದಿನ ಪೂರೈಸಿತು.

ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ನಡೆಯುತ್ತಿರು ಹೋರಾಟದ ಸ್ಥಳಕ್ಕೆ ಪತ್ರಕರ್ತ, ಹೋರಾಟಗಾರ ಗಂಗಾಧರ ಕುಷ್ಠಗಿ ಭೇಟಿ ನೀಡಿ ಐತಿಹಾಸಿಕ ಹೋರಾಟಕ್ಕೆ ಬೆಂಬಲಿಸಿದರು.

ಈ ವೇಳೆ ಮಾತನಾಡಿದ ಅವರು, ಸ್ಥಳೀಯ ನಾಯಕರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಜಿಲ್ಲೆಯು ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಹಿಂದುಳಿದ ಜಿಲ್ಲೆಯ ಹಣೆಪಟ್ಟಿಯಿಂದ ಹೊರಬರಬೇಕಾದರೆ ಏಮ್ಸ್‌ ನಂತಹ ಸಂಸ್ಥೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರಮಿಸಬೇಕು ಎಂದು ಆಗ್ರಹಿಸಿದರು.

ಮಹತ್ವಕಾಂಕ್ಷಿ ಜಿಲ್ಲೆ ಎನಿಸಿಕೊಂಡ ರಾಯಚೂರಿಗೆ ಕೇಂದ್ರ ಸರ್ಕಾರ ಇನ್ನೂ ವಿಳಂಬ ಮಾಡದೆ ಆದಷ್ಟು ಶೀಘ್ರದಲ್ಲಿಯೇ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಪರಿಗಣಿಸಿ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಹಿಂದುಳಿದ ರೋಗಗ್ರಸ್ತ ಈ ಪ್ರದೇಶಕ್ಕೆ ಏಮ್ಸ್ ಸಂಸ್ಥೆಯನ್ನು ಮಂಜೂರು ಮಾಡುವುದರ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ರಾಯ ಚೂರು ಜಿಲ್ಲೆಯ ಜನರ ಅಮೂಲ್ಯವಾದ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಮುಂದಾಗಲೇಬೇಕು, ಇಲ್ಲದಿದ್ದಲ್ಲಿ ಅತ್ಯಂತ ಶಾಂತ ರೀತಿ ನಡೆದಿರುವ ಹೋರಾಟ ಮುಂದೆ ಉಗ್ರ ಸ್ವರೂಪ ತಾಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ವಿಶೇಷ ಪ್ರತಿನಿಧಿ ಅಧಿಕಾರಿಗೆ ಸಲ್ಲಿಸಲಾಯಿತು. ರೈತ ಕೃಷಿ ಕಾರ್ಮಿಕ ಹೋರಾಟಗಾರರಾದ ಭಾರದ್ವಾಜ್ ಕೊಪ್ಪಳ, ಎಸ್ .ಮಾರಪ್ಪ ವಕೀಲರು,ವೀರಭದ್ರಪ್ಪ ಅಂಬರಪೇಟೆ, ಲಿಂಗಪ್ಪ ಪೂಜಾರ್, ಡಾ.ಹುಲಿನಾಯಕ್ ಜಾನ್ ವೆಸ್ಲಿ ರೈತ ಮುಖಂಡರಾದ ರೂಪ ಶ್ರೀನಿವಾಸ್ ನಾಯಕ್, ಅನಿತಾ ಮಂತ್ರಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್,ಡಾ. ಎಸ್. ಎಸ್ ಪಾಟೀಲ್, ಎಸ್ .ತಿಮ್ಮಾರೆಡ್ಡಿ, ಡಾ.ಜಗದೀಶ್ ಪುರತಿಪ್ಲಿ, ನರಸಪ್ಪ ಬಾಡಿಯಾಲ್ ,ರಮೇಶ ರಾವ್ ಕಲ್ಲೂರ್ಕರ್, ವಿನಯ್ ಕುಮಾರ್ ಚಿತ್ರಗಾರ ಎಸ್ . ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆಗೆ ಆಗ್ರಹಿಸಿ ಮಾನ್ವಿಯಲ್ಲೂ ಪ್ರತಿಭಟನೆ

ಮಾನ್ವಿ: ಜಿಲ್ಲೆಯಲ್ಲಿ ಏಮ್ಸ್‌ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಮಾನ್ವಿ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೇರಿದ ಘಟಕದ ಪದಾಧಿಕಾರಿಗಳು, ಸದಸ್ಯರು ಬೇಡಿಕೆ ಈಡೇರಿಸಬೇಕು ಎಂದು ತಾಲೂಕಾಡಳಿತದ ಮುಖಾಂತರ ಪ್ರಧಾನಿಗೆ ಮನವಿ ಸಲ್ಲಿಸಿದರು.

ಆರ್ಥಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವುದರಿಂದ ರಾಯಚೂರು ಜಿಲ್ಲೆಯ ಅಭಿವೃದ್ಧಿಗಾಗಿ ಹಾಗೂ ಈ ಭಾಗದ ಜನರಿಗೆ ಉತ್ತಮ ಆರೋಗ್ಯಕ್ಕಾಗಿ ರಾಯಚೂರು ನಗರದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಅಗತ್ಯವಾಗಿದೆ ಎನ್ನುವ ಉದ್ದೇಶದಿಂದ ರಾಯಚೂರು ನಗರದಲ್ಲಿ ಏಮ್ಸ್ ಹೋರಾಟ ಸಮಿತಿ ವತಿಯಿಂದ ಕಳೆದ 900 ದಿನಗಳಿಂದ ನಿರಂತರವಾಗಿ ಅನಿರ್ಧಿಷ್ಟಾವಧಿ ಧರಣಿಯನ್ನು ನಡೆಸುತ್ತಿದ್ದರಾದರೂ ಕೂಡ ಕೇಂದ್ರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಈ ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ಘಟಕದ ಸಂಚಾಲಕರಾದ ಎಚ್.ಶರ್ಪುದ್ದೀನ್ ಪೋತ್ನಾಳ್,ಮನೋಜ್ ಕುಮಾರ ಮಿಶ್ರಾ ,ಅನಿಲ್ ಕುಮಾರ ಎಚ್.ರಾಜಾ ಸುಭಾಚ್‌ಚಂದ್ರ ನಾಯಕ,ರಾಜು ತಾಳಿಕೋಟೆ, ಭೀಮರಾಯ ಸಿತಿಮನಿ,ಎಂ.ಡಿ.ಹಾರೂನ್ ,ಹುಸೇನ್ ಬಾಷ್,ಆಲೀಖಾನ್, ಮೋದಿನ್ ಸಾಬ್,ರಾಚಪ್ಪ, ಎಂ.ಎ.ಹೆಚ್. ಮುಖಿಂ,ಭೀಮಣ್ಣ ಉದ್ಬಳ್,ಶೇಖ್‌ ಫರೀದ್ ಉಮ್ರಿ,ಮಹಾಂತೇಶ ಓಲೇಕಾರ ಸೇರಿದಂತೆ ಸರ್ವೋದಯ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದರು.ಏಮ್ಸ್ ಸ್ಥಾಪನೆ ಆಗ್ರಹಿಸಿ ಪಕ್ಷಾತೀತ ಪ್ರತಿಭಟನೆ

ಲಿಂಗಸುಗೂರು: ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ನಾನಾ ರಾಜಕೀಯ ಪಕ್ಷಗಳ ಮುಖಂಡರು, ನ್ಯಾಯವಾದಿಗಳ ಸಂಘ, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಪ್ರಗತಿಪರರು ಸೇರಿದಂತೆ ಸೋಮವಾರ ಸಹಾಯಕ ಆಯುಕ್ತರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಐಐಟಿ ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿತ್ತು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಐಐಟಿ ಸ್ಥಾಪನೆ ಆಗಲಿಲ್ಲ. ಆದರೆ ರೋಗಗಳ ಆಗರವಾಗಿರುವ ಕಲ್ಯಾಣ ಕರ್ನಾಟಕದ ಪ್ರದೇಶದ ರಾಯಚೂರು ಜಿಲ್ಲೆಯಲ್ಲಿ 2020ರಲ್ಲಿ ಭಾರತದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸ್ಥಾಪನೆಗೆ ಕೂಡಲೇ ಮುಂದಾಗಬೇಕು. ಏಮ್ಸ್ ಸ್ಥಾಪನೆಯಿಂದ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.ಈಗಾಗಲೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂದು ನಡೆಸುತ್ತಿರುವ ಹೋರಾಟಕ್ಕೆ ಕಲ್ಯಾಣ ಕರ್ನಾಟಕ ಇತರೇ ಜಿಲ್ಲೆಗಳು ಬೆಂಬಲ ನೀಡುತ್ತಿವೆ. ಅದರಂತೆ ಜಿಲ್ಲೆಯ ಜನರು ಏಮ್ಸ್ ಸ್ಥಾಪನೆ ಹೋರಾಟ ಬೆಂಬಲಿಸಬೇಕೆಂದು ಮನವಿ ಮಾಡಿದರು.ಈ ವೇಳೆ ಡಿ.ಬಿ. ಸೋಮನಮರಡಿ, ನ್ಯಾಯವಾದಿ ನಾಗರಾಜ ಗಸ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಬಿಜೆಪಿ ಹಿರಿಯ ಮುಖಂಡ ಗಿರಿಮಲ್ಲನಗೌಡ, ಪುರಸಭೆ ಸದಸ್ಯ ಮುದಕಪ್ಪ ನಾಯಕ, ಕರವೇ ಅಧ್ಯಕ್ಷರಾದ ಮಾದೇಶ ಸರ್ಜಾಪುರ, ತಿಮ್ಮಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಗವಿಸಿದ್ದಪ್ಪ ಸಾಹುಕಾರ, ಮುತ್ತಣ್ಣ, ವಿರುಪಾಕ್ಷಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಪ್ರಸಾದರೆಡ್ಡಿ, ನ್ಯಾಯವಾದಿ ಕುಪ್ಪಣ್ಣ ಮಾಣೀಕ್, ಮೋಹನ್ ಗೋಸ್ಲೆ, ದೇವಪ್ಪ ಹೊನ್ನಳ್ಳಿ ಸೇರಿದಂತೆ ನಾನಾ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಇದ್ದರು.