ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಶ್ರದ್ಧೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರವೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯವಾದಿ ಪರಶುರಾಮ ಯತ್ನಾಳ ಅವರು ಹೇಳಿದರು.ನಗರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ‘ಎ’ ಮತ್ತು ‘ಬಿ’ ಘಟಕಗಳು ಹಾಗೂ ಸಿ.ಬಿ. ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ವ್ಯಕ್ತಿತ್ವ ವಿಕಸನ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಿಗಿಸಿಕೊಂಡಾಗ ಸ್ಪರ್ಧಾ ಪೈಪೋಟಿ ಹೆಚ್ಚಾಗುತ್ತದೆ. ಗುರಿ ಸಾಧನೆಗೆ ನಿರಂತರ ಪರಿಶ್ರಮ ಪಡಬೇಕು. ಯುವಜನತೆ ಛಲದೊಂದಿಗೆ ನಿರಂತರ ಪ್ರಯತ್ನಪಟ್ಟರೆ ಜೀವನದಲ್ಲಿ ಗೆಲುವು ಸಾಧಿಸಬಹುದು. ಆದರೆ, ಗುರಿ ತಲುಪುವ ಬದ್ಧತೆ ಹೊಂದಿರಬೇಕಾದದು ಮುಖ್ಯ ಎಂದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಂಪರ್ಕ ಮತ್ತು ಮಾಹಿತಿಯ ಕೊರತೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮತ್ತು ಸಂಪರ್ಕ ಬೆಳೆಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳಬೇಕಿದೆ. ಕನ್ನಡದ ಜೊತೆಗೆ ಆಂಗ್ಲ ಭಾಷೆಯ ಜ್ಞಾನ ಪಡೆದು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ಎಲ್ಲ ರೀತಿಯ ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಬರೋಡಾ ಬ್ಯಾಂಕಿನ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಲಿಂಗಣ್ಣ ಸಾಹು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಹಲವಾರು ಅವಕಾಶಗಳಿವೆ. ಆದರೆ ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ ಅಗತ್ಯವಿದೆ ಎಂದರು.
ಪತ್ರಕರ್ತ ನಿಲೇಶ ಬೇನಾಳ ಅವರು ಗಾಂಧೀಜಿ ಅವರ ಬದುಕು ಮತ್ತು ಸಾಧನೆ ಕುರಿತು ಮಾತನಾಡಿದರು. ಪ್ರಗತಿಪರ ರೈತ ಸುರೇಶ ಕಿರಸೂರ ಮಾತನಾಡಿದರು.ಮುಖ್ಯಗುರು ಭಾಗಪ್ಪ ಸಿ., ಶಿಕ್ಷಕರಾದ ಅರುಣಕುಮಾರ ಜೇವರ್ಗಿ, ಶರಣಯ್ಯಸ್ವಾಮಿ ಹಿರೇಮಠ, ತಿಪ್ಪಣ ಜಮಾದಾರ, ವಿಶ್ವನಾಥ ಗದ್ದುಗೆ, ಎಸ್.ಎಂ. ರಾಂಪುರೆ, ವಿಶ್ವನಾಥರಡ್ಡಿ ಹೋತಪೇಟ, ಸುರೇಶ ಮೂಡಬೂಳ, ಸುಧಾ, ಮೈಮುನಾ ಬೇಗಂ, ನಾಗರಾಜ ದೇಶಮುಖ, ರಾಘವೇಂದ್ರ ಹಾರಣಗೇರಾ, ಸತೀಶ ಇತರರಿದ್ದರು.