ಇಂದಿನ ಯುವಕರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ

ಕೊಪ್ಪಳ: ಬೂತ್‌ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಸಲಹೆ-ಸೂಚನೆ ಆಧಾರದ ಮೇಲೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದೇ ಸಂಘಟನ್ ಸೃಜನ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಎಐಸಿಸಿ ವೀಕ್ಷಕ ವಿವೇಕ್ ಬನ್ಸಲ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬೂತ್‌ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂಘಟನೆಯನ್ನು ಪರಿಣಾಮಕಾರಿಯಾಗಿ ಕಟ್ಟಬೇಕು ಎಂಬ ಉದ್ದೇಶದಿಂದ ಎಐಸಿಸಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಆ. 15ರವರೆಗೆ ಸಂಘಟನ್ ಸೃಜನ್ ಅಭಿಯಾನ ನಡೆಯಲಿದೆ. ಎಐಸಿಸಿಯಿಂದ ನೇಮಕಗೊಂಡಿರುವ ವೀಕ್ಷಕರು ತಾಲೂಕು, ಬ್ಲಾಕ್ ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಪಕ್ಷದ ಸಂಘಟನೆ ಹೇಗೆ ನಡೆಯುತ್ತಿದೆ, ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳೇನು, ಸಂಘಟನೆ ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಕಾರ್ಯಕರ್ತರಿಂದ ನೇರವಾಗಿ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಇಂದಿನ ಯುವಕರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ.ಆದರೆ ಕೇಂದ್ರ ಸರ್ಕಾರ ಉದ್ಯೋಗ ಭರ್ತಿಗೆ ಅಗತ್ಯ ಆದ್ಯತೆ ನೀಡುತ್ತಿಲ್ಲ. ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ನಡೆಸುತ್ತಿರುವ ವಿವಿಧ ಹೋರಾಟಗಳೇ ಇದಕ್ಕೆ ಸಾಕ್ಷಿ ಎಂದರು.

ಮಾಜಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಕುಡಿವ ನೀರು ಹಾಗೂ ರೈತರಿಗೆ ನೀರಾವರಿ ಯೋಜನೆ ಕೈಗೊಳ್ಳುವುದು ಮುಖ್ಯ. ಇದರ ಜತೆ ಕೈಗಾರಿಕೆಗಳಿಗೆ ಕೇವಲ ೧ಟಿಎಂಸಿ ನೀರನ್ನು ನೀಡಲಾಗುತ್ತಿದೆ. ನದಿಗೆ ಹರಿದು ಹೋಗುವ ನೀರನ್ನು ಕೈಗಾರಿಕೆಯವರು ಬಳಸಿಕೊಳ್ಳುತ್ತಿದ್ದಾರೆ. ಆದರೆ, ನೀರಾವರಿ ಹಾಗೂ ಕುಡಿವ ನೀರು ಪೂರೈಕೆಯೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಶಾಂತಪ್ಪ, ಕೆಪಿಸಿಸಿ ವೀಕ್ಷಕಿ ಸುಜಾತಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಮಲ್ಲು ಪೂಜಾರ್, ಸುರೇಶ ದಾಸರಡ್ಡಿ ಸೇರಿ ಹಲವರು ಇದ್ದರು.

ಬಿಜೆಪಿಯವರು ಹೋರಾಟ ನಡೆಸುವುದಕ್ಕೆ ಕಾಂಗ್ರೆಸ್‌ನಿಂದ ಯಾವುದೇ ಅಭ್ಯಂತರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಕ್ಕೂ ತನ್ನ ವಿಚಾರಗಳಿಗಾಗಿ ಹೋರಾಟ ನಡೆಸುವ ಹಕ್ಕಿದೆ, ಆದರೆ ಹೋರಾಟದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೂ ಕೆಲವು ಮಿತಿಗಳಿವೆ. ಈ ಹಿಂದೆ ನಾವು ಸಹಿತ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರೂ ಸಹಿತ ಬಿಜೆಪಿಯವರ ರೀತಿಯಲ್ಲಿ ವರ್ತಿಸಿಲ್ಲ ಅವರು ತಮ್ಮ ಬುದ್ಧಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ಟಿಪ್ಪಣಿ ಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ತಿಳಿಸಿದ್ದಾರೆ.