ಸಾರಾಂಶ
ಹೊಳೆನರಸೀಪುರ: ಕಲಿಕೆಯ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿಯ ಪಾಲನೆ, ವಿಧೇಯತೆ ಜತೆಗೆ ಇಂದಿನ ಸರ್ಧಾತ್ಮಕ ಜಗತ್ತಿಗೆ ಅಗತ್ಯವಾದ ಸಾಮಾನ್ಯ ಜ್ಞಾನ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಗುರಿ ಹೊಂದಲಾಗಿದೆ ಎಂದು ಋಷಿಶ್ರೀ ವಿದ್ಯಾಸಂಸ್ಥೆಯ ಅಧ್ಯಕ್ಷ ಜೀವನ್ ತಿಳಿಸಿದರು.
ತಾ. ಐಚನಹಳ್ಳಿ ಸಮೀಪವಿರುವ ಋಷಿಶ್ರೀ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ದೀಕ್ಷದಾನ ಸಮಾರಂಭ ಉದ್ಘಾಟಿಸಿಅವರು ಮಾತನಾಡಿದರು. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸುವ ಜತೆಗೆ ವಷಿಷ್ಠ ಮಹರ್ಷಿ, ವ್ಯಾಸ ಮಹರ್ಷಿ, ಅಗಸ್ತ್ಯ ಮಹರ್ಷಿ ಹಾಗೂ ಗೌತಮ ಮಹರ್ಷಿಗಳ ಬಗ್ಗೆ ತಿಳಿಸಿಕೊಡುವ ಮೂಲಕ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ವಿದ್ಯಾರ್ಥಿಗಳಿಗೆ ಆರ್ಥೈಸುವ ಕಾರ್ಯ ಮಾಡಲಾಗಿದೆ. ಮಹರ್ಷಿಗಳ ಹೆಸರಿನಲ್ಲಿ ನಾಲ್ಕು ತಂಡಗಳನ್ನು ರಚಿಸಿ, ತಂಡದ ಮುಂದಾಳತ್ವ ಹಾಗೂ ಸಂಸತ್ ಆಡಳಿತದ ನಾಯಕತ್ವದಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುವ ಮೂಲಕ ಹೊಸ ಚಿಂತನೆಗಳೊಂದಿಗೆ ಭವಿಷ್ಯ ರೂಪಿಸುವ ಗುರಿ ಹೊಂದಿದ್ದೇವೆ ಎಂದರು.
ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗಿ ವಿದ್ಯಾಶ್ರೀ, ಉಪ ಪ್ರಧಾನಿಯಾಗಿ ಭಾರ್ಗವ, ಆರೋಗ್ಯ ಸಚಿವನಾಗಿ ಹರ್ಷ, ಕ್ರೀಡಾ ಸಚಿವನಾಗಿ ನೂತನ್ ಎಸ್.ಗೌಡ, ಸಾರಿಗೆ ಸಚಿವನಾಗಿ ಕರಣ್ ಎಸ್.ಗೌಡ, ಶಿಕ್ಷಣ ಸಚಿವೆಯಾಗಿ ಮೋಹನಾ ಕುಮಾರಿ, ಸಂಸ್ಕೃತಿ ಸಚಿವೆಯಾಗಿ ಪ್ರಗತಿ ಪ್ರಮಾಣ ವಚನ ಸ್ವೀಕರಿಸಿದರು.ವಷಿಷ್ಠ ಮಹರ್ಷಿ ತಂಡದ ನಾಯಕಿಯಾಗಿ ಉನ್ನತಿ ವಿಕ್ರಂ, ವ್ಯಾಸ ಮಹರ್ಷಿ ತಂಡದ ನಾಯಕಿಯಾಗಿ ಚಿರಂತನ ಪಿ., ಅಗಸ್ತ್ಯ ಮಹರ್ಷಿ ತಂಡದ ನಾಯಕಿಯಾಗಿ ತನುಶ್ರೀ ಎಸ್. ಹಾಗೂ ಗೌತಮ ಮಹರ್ಷಿ ತಂಡದ ನಾಯಕಿಯಾಗಿ ಗುಣಪ್ರಿಯ ಬಿ.ಎಂ. ಅವರನ್ನು ನೇಮಿಸಲಾಯಿತು.
ಪ್ರಾಂಶುಪಾಲ ಲಾಲೂ ಜೋಸೆಫ್, ಉಪ ಪ್ರಾಂಶುಪಾಲ ಭರತ್, ಸಂಯೋಜಕಿ ಸುಷ್ಮಾ, ಶಿಕ್ಷಕರಾದ ಶಿವಕುಮಾರ್, ಪ್ರತಾಪ್,ಗುರು, ಇತರರು ಇದ್ದರು. ಸರಿತಾ ಕಾರ್ಯಕ್ರಮ ನಿರೂಪಿಸಿದರು, ರಚನಾ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು.