1997ರಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ನಲ್ಲಿ ಡಾ. ತುಂಬೆ ಮೊಯ್ದೀನ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ತುಂಬೆ ಗ್ರೂಪ್’ 29 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ 30ನೇ ವರ್ಷಕ್ಕೆ ಪ್ರವೇಶಿಸಿದೆ.

ಮಂಗಳೂರು: 1997ರಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ನಲ್ಲಿ ಡಾ. ತುಂಬೆ ಮೊಯ್ದೀನ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ತುಂಬೆ ಗ್ರೂಪ್’ 29 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ 30ನೇ ವರ್ಷಕ್ಕೆ ಪ್ರವೇಶಿಸಿದೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಸಣ್ಣ ಹೆಜ್ಜೆಯೊಂದಿಗೆ ಆರಂಭವಾದ ಸಂಸ್ಥೆ ಇಂದು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನೆ ಸೇರಿದಂತೆ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈವಿಧ್ಯಮಯ ಬೃಹತ್‌ ಶೈಕ್ಷಣಿಕ-ಆರೋಗ್ಯ ಸಮೂಹವಾಗಿ ಬೆಳೆದಿದೆ.ಅಜ್ಮಾನ್ ಆಡಳಿತ ಕುಟುಂಬದ ಆಹ್ವಾನದ ಮೇರೆಗೆ ಡಾ. ತುಂಬೆ ಮೊಯ್ದೀನ್ ಅವರು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಮಹತ್ವದ ಅವಕಾಶ ಪಡೆದಿದ್ದರು. ಇದರ ಫಲವಾಗಿ 1998ರಲ್ಲಿ ಗಲ್ಫ್ ಮೆಡಿಕಲ್ ಕಾಲೇಜು ಆರಂಭಗೊಂಡಿದ್ದು, ಬಳಿಕ ಅದು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಾಗಿ ರೂಪಾಂತರಗೊಂಡಿತು. ಇಂದು ಈ ವಿಶ್ವವಿದ್ಯಾಲಯ ಏಳು ಕಾಲೇಜುಗಳು ಹಾಗೂ 50ಕ್ಕೂ ಹೆಚ್ಚು ಮಾನ್ಯತೆ ಪಡೆದ ಕೋರ್ಸ್‌ಗಳನ್ನು ಹೊಂದಿದ್ದು, 111ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 5,000 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ವಿಶ್ವವಿದ್ಯಾಲಯ 70ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗ ಹೊಂದಿದೆ. ಸಂಶೋಧನಾ ಅನುದಾನಕ್ಕಾಗಿ ವಾರ್ಷಿಕ ಸುಮಾರು 10 ಮಿಲಿಯನ್ ದಿರ್ಹಂ ಹೂಡಿಕೆ ಮಾಡಲಾಗುತ್ತಿದೆ.

ತುಂಬೆ ಗ್ರೂಪ್‌ನ ಆರೋಗ್ಯ ಸೇವಾ ಜಾಲವೂ ವಿಸ್ತಾರಗೊಂಡಿದ್ದು, ಆಸ್ಪತ್ರೆಗಳು, ಕ್ಲಿನಿಕ್‌ಗಳು, ವೈದ್ಯಕೀಯ ಕೇಂದ್ರಗಳು, ಡಯಾಗ್ನೋಸ್ಟಿಕ್ ಲ್ಯಾಬ್‌ಗಳು ಹಾಗೂ ಔಷಧಾಲಯಗಳನ್ನು ಒಳಗೊಂಡಿದೆ. ಸಂಸ್ಥೆಯ ಆರೋಗ್ಯ ಕೇಂದ್ರಗಳಲ್ಲಿ ಇದುವರೆಗೆ 175 ರಾಷ್ಟ್ರಗಳ 1.9 ಕೋಟಿಗೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಹೆರಿಗೆಗಳು ನಡೆದಿವೆ.25 ಎಕರೆಯಲ್ಲಿ ತುಂಬೆ ಮೆಡಿಸಿಟಿ: ಅಜ್ಮಾನ್‌ನ ಅಲ್ ಜುರ್ಫ್‌ನಲ್ಲಿರುವ 25 ಎಕರೆ ವಿಸ್ತೀರ್ಣದ ತುಂಬೆ ಮೆಡಿಸಿಟಿ ಸಂಸ್ಥೆಯ ಪ್ರಮುಖ ಯೋಜನೆಯಾಗಿದೆ. ಇಲ್ಲಿ 350 ಹಾಸಿಗೆಗಳ ತುಂಬೆ ಯುನಿವರ್ಸಿಟಿ ಹಾಸ್ಪಿಟಲ್, ತುಂಬೆ ಡೆಂಟಲ್ ಹಾಸ್ಪಿಟಲ್ ಹಾಗೂ ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಷನ್ ಹಾಸ್ಪಿಟಲ್ ಸೇರಿದಂತೆ ಸಮಗ್ರ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳಿವೆ. ಈ ಸಮುಚ್ಚಯಕ್ಕೆ ಪ್ರತಿದಿನ ಸುಮಾರು 15,000 ಮಂದಿ ಭೇಟಿ ನೀಡುತ್ತಾರೆ.

ಮುಂದಿನ ವಿಸ್ತರಣೆಯ ಭಾಗವಾಗಿ ಶಾರ್ಜಾ ಹೆಲ್ತ್‌ಕೇರ್ ಸಿಟಿಯಲ್ಲಿ 120 ಹಾಸಿಗೆಗಳ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆ, ತುಂಬೆ ಮೆಡಿಸಿಟಿಯಲ್ಲಿ ಪಶುವೈದ್ಯಕೀಯ ಬೋಧನಾ ಆಸ್ಪತ್ರೆ ಹಾಗೂ ಪಶುವೈದ್ಯಕೀಯ ಕಾಲೇಜು ಮತ್ತು ತುಂಬೆ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಲಾಗಿದೆ.ದುಬೈನಲ್ಲಿ ತುಂಬೆ ಮೆಡಿಸಿಟಿ ಸ್ಥಾಪಿಸುವ ಯೋಜನೆಯೂ ಪ್ರಗತಿಯಲ್ಲಿದ್ದು, ಸುಮಾರು 1,000 ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಸಹಯೋಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಯುಎಇಯಲ್ಲೇ ಮೊದಲ ಬಾರಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ಮುಂದಾಗಿದೆ.

ಜಾಗತಿಕ ಶಿಕ್ಷಣಕ್ಕೆ ಆದ್ಯತೆ: ತುಂಬೆ ಇಂಟರ್‌ನ್ಯಾಷನಲ್ ಪಾತ್‌ವೇ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಯುಎಇಯಲ್ಲಿ ತಮ್ಮ ಫೌಂಡೇಶನ್ ಶಿಕ್ಷಣ ಪೂರ್ಣಗೊಳಿಸಿ, ಯುರೋಪ್‌ನ ಸಹಭಾಗಿ ವಿಶ್ವವಿದ್ಯಾಲಯಗಳಲ್ಲಿ ಕ್ಲಿನಿಕಲ್ ತರಬೇತಿ ಪಡೆಯುವ ಅವಕಾಶ ಹೊಂದಿದ್ದಾರೆ.

ಡಾ. ತುಂಬೆ ಮೊಯ್ದೀನ್ ಅವರಿಗೆ 2024ರ ಅಕ್ಟೋಬರ್‌ನಲ್ಲಿ ಕರ್ನಾಟಕದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ. 2026ರ ಜನವರಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ‘ನ್ಯೂ ಇಯರ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಮೂರು ಖಂಡಗಳ ವಿಶ್ವವಿದ್ಯಾಲಯಗಳಿಂದ ಐದು ಗೌರವ ಡಾಕ್ಟರೇಟ್‌ಗಳನ್ನೂ ಅವರು ಪಡೆದಿದ್ದಾರೆ.ಸಂಸ್ಥೆಯ ಮುಖ್ಯಾಂಶಗಳು: 26 ಬ್ರ್ಯಾಂಡ್‌ಗಳು, 15 ಕ್ಷೇತ್ರಗಳಲ್ಲಿ ಕಾರ್ಯಾಚರಣೆ, 1.9 ಕೋಟಿಗೂ ಅಧಿಕ ರೋಗಿಗಳಿಗೆ ಚಿಕಿತ್ಸೆ, 7 ಶೈಕ್ಷಣಿಕ ಆಸ್ಪತ್ರೆಗಳು, 46 ಔಷಧಾಲಯಗಳು, 1 ಲಕ್ಷಕ್ಕೂ ಅಧಿಕ ಹೆರಿಗೆಗಳು, 350 ಹಾಸಿಗೆಗಳ ತುಂಬೆ ಯುನಿವರ್ಸಿಟಿ ಹಾಸ್ಪಿಟಲ್, 5,000 ವಿದ್ಯಾರ್ಥಿಗಳು, 7 ಕಾಲೇಜುಗಳು, 50ಕ್ಕೂ ಅಧಿಕ ಶೈಕ್ಷಣಿಕ ಕಾರ್ಯಕ್ರಮಗಳು, 111ಕ್ಕೂ ಅಧಿಕ ರಾಷ್ಟ್ರಗಳ ವಿದ್ಯಾರ್ಥಿಗಳು ಹಾಗೂ ಸುಮಾರು 4,000 ಉದ್ಯೋಗಿಗಳು. ಸಂಶೋಧನಾ ಅನುದಾನಕ್ಕೆ ವಾರ್ಷಿಕ ಸುಮಾರು 1 ಕೋಟಿ ದಿರ್ಹಂ ಮತ್ತು ‘ಕೇರ್ ಆ್ಯಂಡ್ ಶೇರ್’ ವಿದ್ಯಾರ್ಥಿವೇತನ ಯೋಜನೆಗೆ 6 ಕೋಟಿ ದಿರ್ಹಂಗೂ ಅಧಿಕ ಮೊತ್ತವನ್ನು ಸಂಸ್ಥೆ ಮೀಸಲಿರಿಸಿದೆ.

ಕರಾವಳಿಯಲ್ಲಿ ತುಂಬೆ ಗ್ರೂಪ್‌ ಶೈಕ್ಷಣಿಕ ಯೋಜನೆ: ಡಾ.ತುಂಬೆ ಮೊಯ್ದಿನ್‌: ಮುಂದಿನ 3 ವರ್ಷದಲ್ಲಿ ತುಂಬೆ ಗ್ರೂಪ್‌ ಸಂಸ್ಥೆಯಿಂದ ಪ್ಯಾರಾ ಮೆಡಿಕಲ್‌ ಕೋರ್ಸ್‌ಗೆ ಸಂಬಂಧಿಸಿ ಕರಾವಳಿಯಲ್ಲಿ ಶೈಕ್ಷಣಿಕ ಯೋಜನೆಯನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದು ಪ್ರತಿಷ್ಠಿತ ತುಂಬೆ ಗ್ರೂಪ್‌ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್‌ ತಿಳಿಸಿದ್ದಾರೆ.ಮಂಗಳೂರು ಹೊರವಲಯದ ತುಂಬೆ ಸಿಟಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಸಂವಾದ ನಡೆಸಿದ ಅವರು, ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಲು ನಿರ್ಧರಿಸಿದ್ದೀರಾ ಎಂಬ ಪ್ರಶ್ನೆಗೆ ಈ ಉತ್ತರ ನೀಡಿದರು. ಇಲ್ಲಿ ಮೆಡಿಕಲ್‌ ಕಾಲೇಜು, ಆಸ್ಪತ್ರೆ ಸ್ಥಾಪಿಸುವ ಸಾಧ್ಯತೆಯನ್ನು ನಿರಾಕರಿಸಿದ ಅವರು, ಪ್ಯಾರಾ ಮೆಡಿಕಲ್‌ ಕೋರ್ಸ್‌ ಯೋಜನೆ ಹಮ್ಮಿಕೊಳ್ಳುವ ಕುರಿತಂತೆ ಸುಳಿವು ನೀಡಿದರು.

ಕಳೆದ 30 ವರ್ಷಗಳ ಅನುಭವದಲ್ಲಿ ನಾನೊಬ್ಬ ಬಿಸಿನೆಸ್‌ಮೆನ್‌. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಇನ್ನೂ ಮಾಡಬೇಕು ಎಂಬ ಅಭಿಲಾಷೆ ಇದೆ. ಈಗಾಗಲೇ ಯುಎಇಯಲ್ಲಿ ಸುಸಜ್ಜಿತ ವೆಟರ್ನರಿ ಮೆಡಿಕಲ್‌ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಇವನ್ನೆಲ್ಲ ಸಾಧಿಸುವುದು ಸುಲಭವಲ್ಲ, ಇಷ್ಟೆಲ್ಲ ಸಾಧನೆಗೆ ದೃಢವಾದ ಸಂಕಲ್ಪ ಬೇಕು. ಅದುವೇ ಚಾಲೆಂಜಿಂಗ್‌. ನನ್ನ ಈ ಸಾಧನೆಗೆ ದೇವರ ಆಶೀರ್ವಾದ, ಕುಟುಂಬದ ಬೆಂಬಲ, ಸಹೋದ್ಯೋಗಿಗಳ ಶ್ರಮ ಎಲ್ಲವೂ ಬೆನ್ನೆಲುಬಾಗಿದೆ ಎಂದರು.

ತುಂಬೆ ಗ್ರೂಪ್‌ನ ಚೀಫ್‌ ಕಮ್ಯುನಿಕೇಶನ್‌ ಆಫೀಸರ್‌ ವಿಘ್ನೇಶ್‌ ಎಸ್‌.ಉನಡ್ಕಾತ್‌ ವಂದಿಸಿದರು. 1997ರಲ್ಲಿ ಆರಂಭವಾದ ಸಂಸ್ಥೆ ಇಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಅತಿದೊಡ್ಡ ವೈದ್ಯಕೀಯ ಶಿಕ್ಷಣ ಕೇಂದ್ರಗಳ ಜಾಲ ನಿರ್ಮಿಸುವ ಗುರಿಯನ್ನು ಸಂಸ್ಥೆ ಹೊಂದಿದ್ದು, ‘ಇನ್ನೋವೇಷನ್ ಮೂಲಕ ಬೆಳವಣಿಗೆ’ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ. -ಡಾ.ತುಂಬೆ ಮೊಯ್ದೀನ್, ಸ್ಥಾಪಕ ಅಧ್ಯಕ್ಷರು, ತುಂಬೆ ಗ್ರೂಪ್‌