ಕೆಎಎಸ್, ಐಎಎಸ್ ಮಾಡುವ ಗುರಿ ಹೊಂದಿ

| Published : Sep 17 2025, 01:07 AM IST

ಸಾರಾಂಶ

ಪರೀಕ್ಷೆಯಲ್ಲಿ ಅಂಕಗಳಿಕೆಯ ಬೆನ್ನುಹತ್ತಿ ಮಾನವೀಯ ಮೌಲ್ಯ ಮರೆಯಾಗುತ್ತಿವೆ. ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನಕ್ಕೆ ಬಹಳಷ್ಟು ಮಹತ್ವವಿದೆ

ಮುಂಡರಗಿ: ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿಕ್ಷರಾಗುವುದರ ಜತೆಗೆ ಕೆಎಎಸ್ ಮತ್ತು ಐಎಎಸ್ ಪಾಸು ಮಾಡುವ ಗುರಿ ಹೊಂದಬೇಕು ಎಂದು ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್.ಹೇಳಿದರು.

ಅವರು ಮಂಗಳವಾರ ಇಲ್ಲಿಯ ಶ್ರೀ ಜಅವಿ ಸಮಿತಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಪರೀಕ್ಷೆಯಲ್ಲಿ ಅಂಕಗಳಿಕೆಯ ಬೆನ್ನುಹತ್ತಿ ಮಾನವೀಯ ಮೌಲ್ಯ ಮರೆಯಾಗುತ್ತಿವೆ. ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನಕ್ಕೆ ಬಹಳಷ್ಟು ಮಹತ್ವವಿದೆ. ಜೀವನದಲ್ಲಿ ದೊಡ್ಡದಾದ ಗುರಿ ಇಟ್ಟುಕೊಂಡು ಪ್ರಯತ್ನಶೀಲರಾಗಿ ಕಾರ್ಯ ನಿರ್ವಹಿಸಿದರೆ ಈ ಜಗತ್ತಿನಲ್ಲಿ ಅಸಾಧ್ಯವೆಂಬುದಿಲ್ಲ. ಆದರೆ ನಿರಂತರ ಪ್ರಯತ್ನ ಮಾಡುತ್ತಿರಬೇಕು ಎಂದರು.

ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಜಿ ಕಾರ್ಯಕ್ರಮ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ ಮಹಾವಿದ್ಯಾಲಯವು ಕಳೆದ ಎರಡು ವರ್ಷದಿಂದ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತಿರುವುದು ಖುಷಿ ತಂದಿದೆ. ಶಿಕ್ಷಕರಾಗುವ ನೀವೆಲ್ಲ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದರೊಂದಿಗೆ ಮಾನವೀಯ ಮೌಲ್ಯ ಬೆಳೆಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ನಿಂಗು ಸೊಲಗಿ ಮಾತನಾಡಿ, ನಮ್ಮಿಂದ ಸಾಧ್ಯವಾಗುದಿಲ್ಲ ಎನ್ನುವ ಮಾತಿಲ್ಲ. ಸತತ ಪ್ರಯತ್ನದಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎನ್ನುವ ಛಲದೊಂದಿಗೆ ಜೀವನ ನಡೆಸಿದರೆ ಜೀವನ ಸಫಲವಾಗುತ್ತದೆ. ಎಲ್ಲರೂ ಎಲ್ಲದರಲ್ಲಿ ಪರಿಪೂರ್ಣರಿರುವುದಿಲ್ಲ. ಶಿಕ್ಷಕ ಪರಿಪೂರ್ಣ ಶಿಕ್ಷಕನಾಗಬೇಕಾದರೆ ಅವನು ಹೆಚ್ಚು-ಹೆಚ್ಚು ಓದಬೇಕು ಮತ್ತು ಕಲಿಯಬೇಕು. ಪುಸ್ತಕಗಳನ್ನು ಓದಲು ಸಾಧ್ಯವಾಗದಿದ್ದರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೇಳುವುದನ್ನಾದರೂ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಣಾ ಸಮಿತಿಯ ಸದಸ್ಯ ನಾಗೇಶ ಹುಬ್ಬಳ್ಳಿ, ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ ಮಾತನಾಡಿದರು. ಅಧ್ಯಕ್ಷತೆಯನ್ನು ಮೇಲ್ವಿಚಾರಣಾ ಸಮಿತಿಯ ಕಾರ್ಯಧ್ಯಕ್ಷ ಸಿ.ಎಸ್. ಅರಸನಾಳ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಣಾ ಸಮಿತಿಯ ಸದಸ್ಯ ಅಜ್ಜಪ್ಪ ಲಿಂಬಿಕಾಯಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಾ. ಡಾ.ಎಂ.ವಿ. ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ. ಹಂಚಿನಾಳ ವಾರ್ಷಿಕ ವರದಿ ಓದಿದರು. ಪ್ರತಿಭಾನ್ವಿತ ಪ್ರಶಿಕ್ಷಣಾರ್ಥಿ ನಿಂಗರಾಜ ಮೇಟಿ ಮತ್ತು ಮಹಾದೇವ ಸಿಂಪಿಗೇರ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಎಸ್.ಕೆ. ಹೊಳೆಯಣ್ಣವರ, ಶ್ರೀಕಾಂತ ಎಂ.ಎಲ್, ಪ್ರೊ. ಕೃಷ್ಣಾ ಬೇಲೇರಿ, ಪ್ರೊ.ಮತ್ತೂರಮಠ, ಶ್ವೇತಾ ಬೆಲ್ಲದ ಮುಂತಾದವರಿದ್ದರು. ಪ್ರೊ. ರಾಜಶೇಖರ ಹುಲ್ಯಾಳ ನಿರೂಪಿಸಿ ಉಪ್ಪಿನಬೆಟಗೇರಿ ವಂದಿಸಿದರು.