ವಾಯುಭಾರ ಕುಸಿತ: ಚಿಕ್ಕಬಳ್ಳಾಪುರದಲ್ಲಿ ಜಿಟಿಜಿಟಿ ಮಳೆ

| Published : Aug 19 2025, 01:00 AM IST

ವಾಯುಭಾರ ಕುಸಿತ: ಚಿಕ್ಕಬಳ್ಳಾಪುರದಲ್ಲಿ ಜಿಟಿಜಿಟಿ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಡಿ‌ಮಳೆಗೆ ವಾಹನ‌ ಸವಾರರು ಸುಸ್ತಾಗಿ ಹೋಗಿದ್ದಾರೆ. ಶಾಲಾ-ಕಾಲೇಜು ಮತ್ತು ಕಚೇರಿಗಳಿಗೆ ತೆರಳುವ ಮಂದಿಗೂ ಮಳೆ‌ರಾಯ ಶಾಕ್ ಕೊಟ್ಟಿದ್ದಾನೆ. ಜೋರು ಚಳಿಗೆ, ಮಳೆಗೆ ಜಿಲ್ಲೆಯ ಜನತೆ ಸುಸ್ತಾಗಿ ಹೋಗಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳಾದ ನಂದಿಗಿರಿಧಾಮ, ಈಶಾ ಕೇಂದ್ರ, ಸೇರಿದಂತೆ ಎಲ್ಲಡೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪ್ರಭಾವದಿಂದಾಗಿ, ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಚಳಿ-ಮಳೆಗೆ ಜನತೆ ನಡುಗಿ ಹೋಗಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆ ಐದು ಗಂಟೆ ವರೆಗೆ ಕೆಲವೆಡೆ ಜಿಟಿ-ಜಿಟಿ ಮಳೆ ಸುರಿಯಿತು. ಜಿಲ್ಲೆಯ ನಿವಾಸಿಗಳು ತೀವ್ರ ಪರದಾಟ ನಡೆಸುತ್ತಿದ್ದಾರೆ. ಭಾನುವಾರ ಸಂಜೆಯಿಂದಲೇ ಶುರುವಾದ ಮಳೆ ಸೋಮವಾರ ಸಂಜೆಯವರೆಗೂ ಜಿಟಿಜಿಟಿ ಸುರಿಯುತ್ತಲೇ ಇದೆ.

ಸುಸ್ತಾದ ವಾಹನ ಸವಾರರು

ಮುಂಜಾನೆಯಿಂದ ಸುರಿದ ಜಡಿ‌ಮಳೆಗೆ ವಾಹನ‌ ಸವಾರರು ಸುಸ್ತಾಗಿ ಹೋಗಿದ್ದಾರೆ. ಶಾಲಾ-ಕಾಲೇಜು ಮತ್ತು ಕಚೇರಿಗಳಿಗೆ ತೆರಳುವ ಮಂದಿಗೂ ಮಳೆ‌ರಾಯ ಶಾಕ್ ಕೊಟ್ಟಿದ್ದಾನೆ. ಜೋರು ಚಳಿಗೆ, ಮಳೆಗೆ ಜಿಲ್ಲೆಯ ಜನತೆ ಸುಸ್ತಾಗಿ ಹೋಗಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳಾದ ನಂದಿಗಿರಿಧಾಮ, ಈಶಾ ಕೇಂದ್ರ, ಸೇರಿದಂತೆ ಎಲ್ಲಡೆ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಮೋಡ ಮುಸುಕಿದ ವಾತಾವರಣ ಮತ್ತು ತಣ್ಣನೆಯ ಜೋರು ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರು ಚಳಿಗೆ ನಡುಗುವಂತಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದ ಪ್ರಭಾವವು ಜಿಲ್ಲೆಯ ಮೇಲೂ ಬಿದ್ದಿದ್ದು ಬೆಚ್ಚಗೆ ಇರಲು ಹೆಚ್ಚಿನ ಜನರು ಟೋಪಿ, ಸ್ವೆಟ‌ರ್, ಜರ್ಕಿನ್‌ಗಳ ಮೊರೆ ಹೋಗಿದ್ದಾರೆ.

ಶೀತಗಾಳಿಗೆ ತತ್ತರಿಸಿದ ಜನತೆ

ಬಂಗಾಲಕೊಲ್ಲಿಯಲ್ಲಿ ಸುಳಿಗಾಳಿ ಪ್ರಭಾವದಿಂದ ವಿವಿಧೆಡೆ ಮಳೆಸುರಿಯುತ್ತಿದ್ದರೆ, ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ಮತ್ತೊಂದೆಡೆ ಬದಲಾದ ವಾತಾವರಣದಿಂದ ಜನರು ಹೊರಗೆ ಬರಲು ಹೆದುರುವಂತಾಗಿದೆ. ಚಳಿಗೆ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು, ಕಣ್ಣು ಉರಿ ಸೇರಿ ಶೀತದ ನಾನಾ ಸಮಸ್ಯೆಗಳು ಕಾಡುತ್ತಿವೆ.ಚಳಿ- ಮಳೆಯ ವಾತಾವರಣದಿಂದ ಬೆಳಗ್ಗೆ ಜನತೆ ವಾಕಿಂಗ್ ಬರಲು ಹಿಂದೇಟು ಹಾಕುತ್ತಿದ್ದರೆ. ಕೆಲವರು ಈ ವಾತಾವರಣದಲ್ಲೇ ಹೊರ ಬಂದು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಳಿಯ ಹಿನ್ನೆಲೆ ಹಾಸಿಗೆಯಿಂದ ಎದ್ದು ಹೊರ ಬರಲು ಹಿಂದೇಟು ಹಾಕಿಮನೆಯಲ್ಲಿಯೇ ಬೆಚ್ಚಗೆ ಇದ್ದಾರೆ. ದಕ್ಷಿಣ ಒಳನಾಡು ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ಕಡೆಗಳಲ್ಲಿ ಸೋನೆ ಮಳೆ ಸುರಿಯುತ್ತಿದೆ.

ಇಂದೂ ಮಳೆ ಸಾಧ್ಯತೆ

ಮಳೆ ಮಂಗಳವಾರವು ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಥಂಡಿ ಇನ್ನಷ್ಟು ಹೆಚ್ಚಾಗಲಿದೆ.ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಮಳೆ ಸುರಿಯುವ ಸಾಧ್ಯತೆ ಇದೆ. ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯನ್ನು ಅಂದಾಜಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದಾರೆ.

.