ವಿಮಾನ ನಿಲ್ದಾಣ ನಿರ್ಮಾಣ ರಾಜಕೀಯ ನಿರ್ಧಾರವಲ್ಲ: ಸಂಸದ ಡಾ.ಕೆ.ಸುಧಾಕರ್

| Published : Apr 17 2025, 12:02 AM IST

ಸಾರಾಂಶ

ವಿಮಾನ ನಿಲ್ದಾಣ ನಿರ್ಮಾಣ ರಾಜಕೀಯವಾಗಿ ಕೈಗೊಳ್ಳುವ ನಿರ್ಧಾರವಲ್ಲ, ಯೋಗ್ಯವಾದ ಸ್ಥಳದಲ್ಲಿ ವಿಮಾನ ನಿಲ್ದಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕುದೂರು

ವಿಮಾನ ನಿಲ್ದಾಣ ನಿರ್ಮಾಣ ರಾಜಕೀಯವಾಗಿ ಕೈಗೊಳ್ಳುವ ನಿರ್ಧಾರವಲ್ಲ, ಯೋಗ್ಯವಾದ ಸ್ಥಳದಲ್ಲಿ ವಿಮಾನ ನಿಲ್ದಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ತಾಲೂಕಿನ ಸೋಲೂರು ಹೋಬಳಿ ತುಪ್ಪದಹಳ್ಳಿ, ಮೈಲನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಈಗಾಗಲೇ ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ನಾಗರಿಕ ವಿಮಾನಯಾನ ನಿಲ್ದಾಣ ಇಲಾಖೆಗೆ ದಾಖಲೆಗಳನ್ನು ನೀಡಿದ್ದು ಅಲ್ಲಿನ ಅಧಿಕಾರಿಗಳ ತಂಡ ಸ್ಥಳಕ್ಕೆ ಬಂದು ಕಾನೂನಾತ್ಮಕವಾಗಿ, ತಾಂತ್ರಿಕವಾಗಿ ಸರಿಯಿದೆಯೇ ಎಂದು ಪರಿಶೀಲಿಸಿ ವರದಿ ನೀಡಲಿದೆ. ಅಂತಿಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಿ ತಿರ್ಮಾನ ಮಾಡಲಿದೆ. ವಿಮಾನ ನಿಲ್ದಾಣ ನನ್ನ ಕ್ಷೇತ್ರದಲ್ಲಿ ಆಗಬೇಕು ಎಂದು ಯಾರೂ ರಾಜಕೀಯವಾಗಿ ತೆಗೆದುಕೊಳ್ಳುವ ನಿರ್ಧಾರವಲ್ಲ, ಯಾರಾದರೂ ಒಬ್ಬರು ನಮ್ಮ ಊರಿಗೆ, ನಮ್ಮ ಕ್ಷೇತ್ರಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಲೂ ಕೂಡ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸರ್ಕಾರ ಹೇಳಿದಂತೆ ಮಾಡುವುದಿಲ್ಲ. ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಯಾವ ಸ್ಥಳ ಯೋಗ್ಯವಾಗಿದೆ. ವಿಮಾನ ನಿಲ್ದಾಣ ಮಾಡಿದರೆ ಹೆಚ್ಚು ಮಂದಿಗೆ ಎಲ್ಲಿ ಅನುಕೂಲವಾಗುತ್ತದೆ, ಅಂತಹ ಯೋಗ್ಯ ಸ್ಥಳವನ್ನು ಮಾತ್ರ ಆಯ್ಕೆಮಾಡಿ ಕೇಂದ್ರ ಸರ್ಕಾರ ಮಂಜೂರಾತಿ ನೀಡುತ್ತದೆ ಎಂದು ಹೇಳಿದರು.

ಸೋಲೂರು ಹೋಬಳಿ ಒಂದು ಕ್ಷೇತ್ರಕ್ಕೆ, ಕಂದಾಯ ಭೂಮಿ ಮತ್ತೊಂದು ಕ್ಷೇತ್ರಕ್ಕೆ ಸೇರಿರುವುದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಇದು ರಾಜಕೀಯ ಉದ್ದೇಶವಲ್ಲ, ರಾಜಕೀಯವಾಗಿ ಒಬ್ಬರು ನಾನು ಇವರಿಗಿಂತ ಹೆಚ್ಚು ಅಂಕ ಪಡೆದಿದ್ದೇನೆ ಎಂದೂ ಹೋರಾಟವಲ್ಲ, ಇದು ಕಾಂಪಿಟೇಷನ್ ಅಲ್ಲ, ಜನಸಾಮಾನ್ಯರಿಗೆ ಒಳ್ಳೆಯದಾಗುವುದು ಮುಖ್ಯ ಎಂದು ಹೇಳಿದರು.

ಸೋಲೂರು ಹೋಬಳಿ ಮಾಗಡಿಯಲ್ಲಿದ್ರೆ ಜನರಿಗೆ ಅನುಕೂಲವಾಗುತ್ತಾ ಅಥವಾ ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆಯಾದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದಾ ಎಂದು ಎರಡು ತಾಲೂಕಿನ ಶಾಸಕರು ಯೋಚನೆ ಮಾಡಬೇಕು. ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರಿಸಿದರೆ ಹೆಚ್ಚು ಜನರಿಗೆ ಲಾಭವಾಗುತ್ತದೆ ಎಂದು ಪತ್ರ ಬರೆದಿದ್ದೇನೆ. ಅವಶ್ಯಕತೆ ಇದ್ರೆ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ, ಕಂದಾಯ ಸಚಿವರು ಇತ್ತ ಗಮನ ಹರಿಸಿ ಹೆಚ್ಚಿನ ಜನರಿಗೆ ಅವಕಾಶವಾಗುವಂತಹ ತಾಲೂಕಿಗೆ ಸೇರ್ಪಡಿಸಲು ತಿರ್ಮಾನ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ಪ್ರಧಾನಿ ನರೆಂದ್ರ ಮೋದಿ ಅವರು ಜಲಜೀವನ್ ಮಿಷನ್ ಯೋಜನೆಯಡಿ ದೇಶದ ಪ್ರತಿ ಬಡವರ ಮನೆಗೆ ನಲ್ಲಿ ಮೂಲಕ ನೀರು ಒದಗಿಸಲು ದೊಡ್ಡ ಧ್ಯೇಯದೊಂದಿಗೆ ಕೋಟ್ಯಂತರ ರು. ವೆಚ್ಚದಲ್ಲಿ ರೂಪಿಸಲಾಗಿದೆ. ಗ್ರಾಮೀಣರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು. ಶುದ್ಧವಾದ ನೀರು ಸೇವನೆ ಮಾಡಬೇಕು ಎಂದು ನಿರ್ಮಿತಿ ಕೇಂದ್ರದಿಂದ ಸುಸಜ್ಜಿತ ನೀರಿನ ಘಟಕ ನಿರ್ಮಿಸಲು ಗುದ್ದಲಿಪೂಜೆ ನೆರವೇರಿಸಲಾಗಿದೆ. ಅಧಿಕಾರಿಗಳು ಗುಣಮಟ್ಟವನ್ನು ಕಾಯ್ದಿರಿಸಬೇಕು, ವಾಟರ್ ಮ್ಯಾನ್‌ಗಳ ಹುದ್ದೆಗೆ ಸ್ಥಳಿಯರನ್ನೇ ನೇಮಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೆ.ಪಿ.ಬೃಂಗೇಶ್ ಮಾತನಾಡಿ, ಗ್ರಾಮ ವಿಕಾಸವಾದರೆ ಮಾತ್ರ ದೇಶ ವಿಕಾಸ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸಂಸದರು ತಮ್ಮ ಅನುದಾನದಡಿ ಶುದ್ದಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದು ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವಕಡೆ ಹಂತ,ಹಂತವಾಗಿ ನೀರಿನ ಘಟಕ ನಿರ್ಮಿಸಲಾಗುವುದು. ಸಂಸದರು ಸೋಲೂರು ಹೋಬಳಿಗೆ ಹೆಚ್ಚು ಒತ್ತು ನೀಡಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ಒತ್ತು ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಎಂ.ವಿ.ನಾಗರಾಜು, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುರೇಶ್, ಸಪ್ತಗಿರಿ ಶಂಕರ್ ನಾಯ್ಕ್, ಹೋಬಳಿ ಅಧ್ಯಕ್ಷ ಸಿಎಂ.ಮಂಜುನಾಥ್, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ, ಉಪಾಧ್ಯಕ್ಷೆ ರೂಪರಘುನಾಥ್, ಲಕ್ಷ್ಮಣ್ , ಲಲಿತಮ್ಮ ಚಿಕ್ಕಣ್ಣ, ನೇತ್ರೇಶ್, ಮಾರಣ್ಣ, ಶ್ರೀನಿವಾಸ್, ಬಸವರಾಜು, ಶಂಕರಪ್ಪ, ರಮೇಶ್, ಕೇಶವ ರಾವ್, ಅಪ್ಪು, ಬಾಬು ರಾವ್, ಜಯಣ್ಣ, ಸಿದ್ದರಾಜು, ಶಿವರಾಜು, ಸ್ವಾಮಿ, ನಿರ್ಮಿತಿ ಕೇಂದ್ರದ ಕರಿಯಪ್ಪ, ಯೋಗೇಶ್ ಗೌಡ, ಗಂಗಾಧರ್, ಜಯರಾಮು, ಎಸ್‌ಸಿ ಮೋರ್ಚಾ ಅಧ್ಯಕ್ಷ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

------------

ಪ್ರಧಾನಿ ಮೋದಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು ಎಂದು ನಿರ್ಮಿತಿ ಕೇಂದ್ರದಿಂದ ಸುಸಜ್ಜಿತ ಶುದ್ಧ ನೀರಿನ ಘಟಕ ನಿರ್ಮಿಸಲಾಗುತ್ತಿದೆ. ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು, ವಾಟರ್ ಮ್ಯಾನ್‌ಗಳ ಹುದ್ದೆಗೆ ಸ್ಥಳಿಯರನ್ನೇ ನೇಮಿಸಬೇಕು.

-ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ