ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗನಗರದ ಹೊರವಲಯದ ಕೋಟ್ಯಂತರ ರು. ಬೆಲೆ ಬಾಳುವ ಏರ್‌ಪೋರ್ಟ್ ರಸ್ತೆಯನ್ನೇ ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟ ಹಗರಣದ ಮಾಹಿತಿಗಾಗಿ ಕಡತ ಮುಟ್ಟುತ್ತಿದ್ದಂತೆ ಹಗರಣದ ಇನ್ನಷ್ಟು ಮಾಹಿತಿ ಹೊರಬೀಳುತ್ತಿದೆ.ಹಿಂದಿನ ಎನ್ಆರ್ ಪುರ ರಸ್ತೆಯಾಗಿದ್ದು, ಈಗ ಏರ್ ಪೋರ್ಟ್ ರಸ್ತೆಯಾಗಿರುವ ಜಾಗದಲ್ಲಿ ಬುಳ್ಳಮ್ಮ ಹಾಗೂ ನಿಂಗಪ್ಪ ಎಂಬುವರಿಗೆ ಕಾನೂನು ವ್ಯಾಪ್ತಿ ಮೀರಿ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ನೀಡಿರುವ ಅಧಿಕಾರಿಗಳು ಈ ಹಿಂದೆ 1962ರಲ್ಲಿ ಸ್ವಾಧೀನವಾಗಿದ್ದ ಜಾಗದ ಅಳತೆ, ಬೊಮ್ಮಣ್ಣ ಎಂಬುವರಿಗೆ ಉಳುವವನೆ ಹೊಲದೊಡೆಯ ಕಾಯ್ದೆಯಡಿ ನೀಡಿದ್ದ ಫಾರಂ 10, ಬುಳ್ಳಮ್ಮ ಎಂಬುವರು ಹಾಕಿದ್ದ ಕೇಸ್ ಸಂಬಂಧ ಹೈ ಕೋರ್ಟ್ ಮತ್ತು ಜಿಲ್ಲಾ ಕೋರ್ಟ್ ನೀಡಿರುವ ಆದೇಶ, ವಿಧಿಸಿರುವ ದಂಡ ಮತ್ತಿತರ ಅಂಶಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಇದೇ ವೇಳೆ ಎಲ್ ಆರ್ ಎಫ್ ವಿಭಾಗದ ಕಡತ ನಿರ್ವಹಿಸುತ್ತಿದ್ದ ಮಹಿಳಾ ಹಾಗೂ ಪುರುಷ ಗುಮಾಸ್ತರಿಂದಲೂ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸ ಲಾಗಿದೆ. ಈ ವೇಳೆ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅಧಿಕಾರಿಗಳು ಕಂದಾಯ ಇಲಾಖೆಯ ವಿವಿಧ ಕಾಯ್ದೆ, ಕಾನೂನು, ಸುತ್ತೋಲೆ ಮತ್ತು ಸೆಕ್ಷನ್‌ಗಳನ್ನು ಸಾರಸಗಟಾಗಿ ಉಲ್ಲಂಘಿಸಿರುವುದರ ಕುರಿತು ಮಾಹಿತಿ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
ಸರ್ವೇ ನಂಬರ್ 103/1 ರಲ್ಲಿ ಸ್ವಾಧೀನದಲ್ಲೇ ಇರದ ಬುಳ್ಳಮ್ಮನಿಗೆ ಗೇಣಿಯನ್ನು ಖಾತ್ರಿಪಡಿಸುವ ಫಾರಂ ನಂಬರ್ 10 ನೀಡಲು ಬರುವುದಿಲ್ಲ ಎಂದು 1993 ಹಾಗೂ 2013ರಲ್ಲೇ ಅಂದಿನ ತಹಸೀಲ್ದಾರ್‌ಗಳು ಆದೇಶ ಮಾಡಿರುವುದು ಕಡತಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ.ಯಾವುದೇ ವ್ಯಕ್ತಿಗೆ ಖಾತೆ ಮಾಡುವ ಮೊದಲು ಫಾರಂ 10 (ಸದರಿ ಜಮೀನಿನ ಹಕ್ಕುಪತ್ರ), ಸರ್ವೇ ಸ್ಕೆಚ್ ಇತ್ಯಾದಿ ದಾಖಲೆ ಇರಬೇಕು. ಅದಕ್ಕೆ ಸಂಬಂಧಿಸಿದ ವ್ಯಕ್ತಿಯಿಂದ ಪ್ರೀಮಿಯಂ, ಬಡ್ಡಿ ಕಟ್ಟಿಸಿಕೊಳ್ಳಬೇಕು. ಫಾರಂ ನಂಬರ್ 10ನ್ನು ಸಬ್ ರಿಜಿಸ್ಟ್ರಾರ್ ಮತ್ತು ಡಿಡಿಎಲ್ ಆರ್ ಕಳಿಸಬೇಕು. ಆದರೆ ಬುಳ್ಳಮ್ಮ ಮತ್ತು ನಿಂಗಪ್ಪ ಪ್ರಕರಣದಲ್ಲಿ ಇಂತಹ ಯಾವುದೇ ನಿಯಮವನ್ನು ಪಾಲಿಸದೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ.
ಕ್ಲರ್ಕ್‌ಗಳೂ ಶಾಮೀಲು:ಇನ್ನು ಇಡೀ ಪ್ರಕರಣದಲ್ಲಿ ಎಸಿಗಳಿಗೆ ಹೈ ಕೋರ್ಟ್ ಆದೇಶ, ನಿಯಮ, ಸುತ್ತೋಲೆ ಮತ್ತಿತರ ಅಂಶಗಳ ಕುರಿತು ಮಾಹಿತಿ ನೀಡಬೇಕಿದ್ದ, ಕಡತಗಳನ್ನು ಮಂಡಿಸಬೇಕಿದ್ದ ಎಲ್ ಆರ್‌ಎಫ್ ವಿಭಾಗದ ಪುರುಷ ಹಾಗೂ ಮಹಿಳಾ ಕ್ಲರ್ಕ್‌ಗಳು ತಪ್ಪೆಸಗಿರುವುದು ಕಂಡುಬಂದಿದೆ.
ಪೋಡಿ ರದ್ದು:ಉಪ ವಿಭಾಗಾಧಿಕಾರಿಗಳು ಮಾಡಿದ ತಪ್ಪನ್ನು ಸರಿಪಡಿಸಲೋ ಎಂಬಂತೆ ಡಿಡಿಎಲ್ಆರ್ ಸಹ ದೂರುದಾರರು ಸೂಕ್ತ ದಾಖಲಾತಿಯೊಂದಿಗೆ ಸಲ್ಲಿಸಿದ್ದ ಮನವಿ ಯನ್ನು ಪರಿಗಣಿಸದೆ, ಸ್ಥಳ ಪರಿಶೀಲನೆ ನಡೆಸಿ ಖಾತೆ ಏರಿಸುವ ಜಾಗ ಏರ್ಪೋರ್ಟ್ ರಸ್ತೆಯಾಗಿದೆ ಎಂದು ತಿಳಿದ ನಂತರವೂ ಸರ್ವೇ ನಂಬರ್ 103/1 ಎಲ್ಲಾ ಪೋಡಿಗಳನ್ನು ರದ್ದುಪಡಿಸಿರುವುದು ದೃಢಪಟ್ಟಿದೆ.ಸಂಕ್ಷಿಪ್ತ ವರದಿ ರವಾನೆ:
ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಈ ಪ್ರಕರಣದ ಕುರಿತು ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಸಚಿವರ ಕಚೇರಿಗೆ ಜಿಲ್ಲಾಡಳಿತದಿಂದ ಸಂಕ್ಷಿಪ್ತ ವರದಿ ನೀಡಲಾಗಿದೆ.ಆಟೋ ಜನ್ ಸಾಫ್ಟ್‌ವೇರ್ ಬಳಕೆ:ನಿಯಮ ಬಾಹಿರವಾಗಿ ಖಾಸಗಿಯವರಿಗೆ ಸರ್ಕಾರಿ ಭೂಮಿ ಖಾತೆ ಮಾಡಿಕೊಡಲು ಆಗಿನ ಉಪವಿಭಾಗಾಧಿಕಾರಿಗಳು ‘ಆಟೋಜನ್ ಸಾಫ್ಟ್‌ವೇರ್’ ಬಳಕೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಯಾವುದೇ ವ್ಯಕ್ತಿಗೆ ಖಾತೆಯನ್ನು ಖಚಿತಪಡಿಸುವ ಮೊದಲು ಅದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಕಚೇರಿಯಲ್ಲಿರುವ ಫಾರಂ 7ಎ, ಟ್ರಿಬ್ಯೂನಲ್ ಫಾರಂ ಮತ್ತಿತರ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿ ತೀರ್ಮಾನಕ್ಕೆ ಬರಬೇಕು. ಆದರೆ ಈ ಪ್ರಕರಣದಲ್ಲಿ ಕೇವಲ ಸರ್ಟಿಫೈಡ್ ಪತ್ರಗಳ ಮೇಲೆ ಖಾತೆ ಮಾಡಿಕೊಡಲಾಗಿದೆ. ಅಂದರೆ, ತಹಸೀಲ್ದಾರ್ ಅವರಿಂದ ನೀಡಲಾಗುವ ಫಾರಂ ನಂಬರ್ 10 ಇಲ್ಲದಿದ್ದರೂ ಆಟೋ ಜನ್ ಸಾಫ್ಟ್‌ವೇರ್ ಮೂಲಕ ಅಧಿಕಾರಿಗಳು ಬುಳ್ಳಮ್ಮನಿಗೆ ಖಾತೆ ಮಾಡಿಕೊಟ್ಟಿದ್ದಾರೆ.ಕನ್ನಡಪ್ರಭ ವರದಿ ಫಲಶೃತಿ: ವರದಿ ನೀಡಲು ಜಿಲ್ಲಾಧಿಕಾರಿ ಆದೇಶಕನ್ನಡಪ್ರಭ ವಾರ್ತೆ ಶಿವಮೊಗ್ಗನಗರದ ಹೊರವಲಯದ ಏರ್ ಪೋರ್ಟ್ ರಸ್ತೆಯನ್ನೇ ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟ ಹಗರಣಕ್ಕೆ ಸಂಬಂಧಿಸಿದಂತೆ ವಿವರ ವರದಿ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ವಿದ್ಯುತ್ ಸ್ಥಾವರ (ಎಂಆರ್‌ಎಸ್) ಸ್ಥಾಪನೆ ಸಂಬಂಧ ನಾಲ್ಕು ದಶಕಗಳ ಹಿಂದೆಯೇ ವಶಪಡಿಸಿಕೊಂಡು, ಪರಿಹಾರ ನೀಡಿದ್ದ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟ ಪ್ರಕರಣದ ಬಗ್ಗೆ ‘ಕನ್ನಡಪ್ರಭ’ ಮಂಗಳವಾರ ವಿಸ್ತೃತ ವರದಿ ಪ್ರಕಟಿಸಿತ್ತು. ಈ ವರದಿ ಬೆನ್ನಲ್ಲೇ ತಮ್ಮ ಅಧೀನ ಅಧಿಕಾರಿಗಳನ್ನು ಮತ್ತು ಹಿರಿಯ ಕಂದಾಯ ಅಧಿಕಾರಿಗಳನ್ನು ಕರೆಸಿಕೊಂಡ ಜಿಲ್ಲಾಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ಪಡೆದರು. ಜೊತೆಗೆ ಈ ಸಂಬಂಧ ಕಡತ ಪರಿಶೀಲಿಸಿ ವರದಿ ನೀಡುವಂತೆ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.