ವಿಮಾನ ನಿಲ್ದಾಣ: ಪಕ್ಷಿಗಳ ತೊಡಕು ತಡೆಯಲು ಸಮೀಕ್ಷೆ

| Published : Jul 24 2025, 12:55 AM IST

ಸಾರಾಂಶ

ವಿಮಾನ ನಿಲ್ದಾಣದ ಆವರಣದಲ್ಲಿ ಪಕ್ಷಿ ಹಾಗೂ ಪ್ರಾಣಿಗಳು ನುಸುಳದಂತೆ ತಡೆಯುವುದು ಅಗತ್ಯ ಮತ್ತು ಅನಿವಾರ್ಯ. ಹಕ್ಕಿ ಡಿಕ್ಕಿ ಹೊಡೆದರೆ ವಿಮಾನದ ಎಂಜಿನ್‌, ರೆಕ್ಕೆ ಮತ್ತು ವಿಂಡ್ ಶೀಲ್ಡ್‌ಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಇದರಿಂದ ವಿಮಾನ ಅಪಘಾತವಾಗುವ ಸಾಧ್ಯತೆಯುಂಟು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿನ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಬಲು ಜೋರಿನಿಂದ ನಡೆಯುತ್ತಿದೆ. ಇದರ ಜತೆ ಜತೆಗೆ ವಿಮಾನ ನಿಲ್ದಾಣಕ್ಕೆ ಪಕ್ಷಿ- ಪ್ರಾಣಿಗಳಿಂದ ಎದುರಾಗುವ ತೊಡಕುಗಳ ನಿಯಂತ್ರಣಕ್ಕೆ ಸಮೀಕ್ಷೆ ನಡೆಸಲು ವಿಮಾನ ನಿಲ್ದಾಣ ಮುಂದಾಗಿದೆ. ಈ ರೀತಿ ಸಮೀಕ್ಷೆ ನಡೆಯುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.

ವಿಮಾನ ನಿಲ್ದಾಣ ಮೇಲ್ದರ್ಜೆಗೇರಿದರೆ ವಿಮಾನಗಳ ಹಾರಾಟ ಮತ್ತಷ್ಟು ಹೆಚ್ಚುತ್ತದೆ. ವಿಮಾನ ಟೇಕ್‌ ಆಫ್‌ ಹಾಗೂ ಲ್ಯಾಂಡ್‌ ಆಗುವಾಗ ಪಕ್ಷಿಗಳಿಂದ ತೊಡಕಾಗುವ ಸಂಭವವುಂಟು. ವಿಮಾನ ಹಾರುವ ಅಥವಾ ಇಳಿಯುವ ಸಂದರ್ಭದಲ್ಲಿ ಪಕ್ಷಿಗಳಿಂದಾಗಿ ಅಪಾಯವಾಗುವ ಸಾಧ್ಯತೆ ಹೆಚ್ಚು. ವಿಮಾನ ನಿಲ್ದಾಣದ ಆವರಣದಲ್ಲಿ ಪಕ್ಷಿ ಹಾಗೂ ಪ್ರಾಣಿಗಳು ನುಸುಳದಂತೆ ತಡೆಯುವುದು ಅಗತ್ಯ ಮತ್ತು ಅನಿವಾರ್ಯ. ಹಕ್ಕಿ ಡಿಕ್ಕಿ ಹೊಡೆದರೆ ವಿಮಾನದ ಎಂಜಿನ್‌, ರೆಕ್ಕೆ ಮತ್ತು ವಿಂಡ್ ಶೀಲ್ಡ್‌ಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಇದರಿಂದ ವಿಮಾನ ಅಪಘಾತವಾಗುವ ಸಾಧ್ಯತೆಯುಂಟು.

ಯಾವ ರೀತಿ ಕ್ರಮ: ರನ್‌ವೇ ಸೇರಿದಂತೆ ವಿಮಾನ ನಿಲ್ದಾಣಗಳಲ್ಲಿ ಯಾವ್ಯಾವ ಪಕ್ಷಿಗಳ ಹಾರಾಟ ಜಾಸ್ತಿಯಿದೆ. ಪ್ರಾಣಿಗಳ ಸಂಚಲನ ಹೆಚ್ಚಿದೆ ಎಂಬುದನ್ನು ಖಾಸಗಿ ಸಂಸ್ಥೆಯು ಒಂದು ವರ್ಷಗಳ ಕಾಲ ಸಮೀಕ್ಷೆ ನಡೆಸುತ್ತದೆಯಂತೆ. ಆ ಬಳಿಕ ಪ್ರಾಣಿ ಪಕ್ಷಿಗಳ ನುಸುಳದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಶಿಫಾರಸ್ಸು ಮಾಡುತ್ತದೆ. ಅದರಂತೆ ವಿಮಾನ ನಿಲ್ದಾಣವೂ ಕ್ರಮ ಕೈಗೊಳ್ಳುತ್ತದೆ.

ಈಗ ಏನಾಗಿದೆ?: ಸಮೀಕ್ಷೆ ನಡೆಸಲು ತಮ್ಮ ಸಂಸ್ಥೆ ಸಿದ್ಧವಿದೆ ಎಂದು ವನ್ಯಲೋಕ ಎಂಬ ಸಂಸ್ಥೆಯು ನಿಲ್ದಾಣದ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದೆ. ಸಂಸ್ಥೆಯ ತಂಡವು ಇಲ್ಲಿನ ಪಕ್ಷಿ ಹಾಗೂ ಪ್ರಾಣಿಗಳ ಚಲನವಲನದ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಿದೆ. ಸಮೀಕ್ಷೆ ನಡೆಸುವ ಕುರಿತಂತೆ ಪ್ರಸ್ತಾವನೆಯನ್ನೂ ವಿಮಾನ ನಿಲ್ದಾಣಕ್ಕೆ ನೀಡಿದೆ.

ಟೇಕ್​ ಆಫ್ ಆಗುವಾಗ ಹಾಗೂ ಲ್ಯಾಂಡ್​ ಆಗುವಾಗ ವಿವಿಧೆಡೆ ನಿಲ್ದಾಣಗಳಲ್ಲಿ ಪಕ್ಷಿ ಬಡಿದು ತೊಂದರೆಯಾದ ಹಾಗೂ ಪ್ರಾಣಿಗಳು ರನ್ ವೇನಲ್ಲಿ ಅಡ್ಡ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಸಮೀಕ್ಷೆ ನಡೆಸಲು ವಿಮಾನ ನಿಲ್ದಾಣ ನಿರ್ಧರಿಸಿದೆ.

ಟೆಂಡರ್‌ ಪ್ರಕ್ರಿಯೆ: ಇದೀಗ ವನ್ಯಲೋಕ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರದ ಅನುಮತಿ ಪಡೆದು ಟೆಂಡರ್‌ ಕರೆಯಲಾಗುತ್ತದೆ. ಟೆಂಡರ್‌ನಲ್ಲಿ ವನ್ಯಲೋಕದ ಜತೆ ಜತೆಗೆ ಯಾವ್ಯಾವ ಸಂಸ್ಥೆಗಳು ಭಾಗವಹಿಸುತ್ತವೆ ಎಂಬುದನ್ನು ಪರಿಶೀಲಿಸಿ ಬಳಿಕ ಒಂದು ಸಂಸ್ಥೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಟೆಂಡರ್‌ ಪ್ರಕ್ರಿಯೆಯೆಲ್ಲ ಪೂರ್ಣಗೊಂಡು ಸಮೀಕ್ಷೆ ಶುರುವಾಗಬೇಕೆಂದರೆ ಕನಿಷ್ಠ ಒಂದೂವರೆಯಿಂದ 2 ತಿಂಗಳ ಕಾಲ ಬೇಕಾಗಬಹುದು. ಆ ಬಳಿಕ ಸಂಸ್ಥೆಯಿಂದ ಒಂದು ವರ್ಷದವರೆಗೆ ಸಮೀಕ್ಷೆ ನಡೆಯಲಿದೆ ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.

ಹಾಗೆ ನೋಡಿದರೆ ವಿಮಾನ ನಿಲ್ದಾಣದೊಳಗೆ ಈ ರೀತಿ ಪ್ರಾಣಿಗಳ ನುಸುಳುವಿಕೆ, ಪಕ್ಷಿಗಳ ಹಾರಾಟ ತಡೆಗಟ್ಟಲು ಬೇರೆ ಬೇರೆ ವಿಮಾನ ನಿಲ್ದಾಣಗಳಲ್ಲಿ ಸಮೀಕ್ಷೆ ನಡೆಸಿ ಕ್ರಮ ಕೈಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ರೀತಿ ಸಮೀಕ್ಷೆ ನಡೆಸಲು ಮುಂದಾಗಿರುವುದು ವಿಶೇಷ. ಜತೆಗೆ ಇತ್ತೀಚಿಗೆ ಅಹಮದಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದಾಗಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಸಮೀಕ್ಷೆ ಹೆಚ್ಚು ಮಹತ್ವ ಪಡೆದಂತೆ ಆಗಿರುವುದಂತೂ ಸತ್ಯ.

ಈಗ ಏನು ಮಾಡುತ್ತಿದೆ?: ವಿಮಾನ ನಿಲ್ದಾಣ ಸುತ್ತ ಪ್ರಾಣಿ ಪಕ್ಷಿಗಳ ಹಾವಳಿ ಕಡಿಮೆ ಮಾಡಲು, ರನ್‌ ವೇ ಸುತ್ತಲೂ ಕಾಣಿಸಿಕೊಳ್ಳುವ ಪಕ್ಷಿಗಳನ್ನು ಓಡಿಸಲು ಪಟಾಕಿ ಸಿಡಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡವೇ ಇದೆ. ಇನ್ನು ವಿಮಾನ ನಿಲ್ದಾಣದೊಳಗೆ ಪಕ್ಷಿಗಳು ಹಾರಿ ಬರುವುದನ್ನು ತಡೆಯಲು ಬಂದೂಕಿನ ಸದ್ದು ಹೊಮ್ಮುವಂತೆ ಯಾಂತ್ರಿಕ ವ್ಯವಸ್ಥೆ ಅಳವಡಿಸಲಾಗಿದೆ. ಎಲ್‌ಪಿಜಿ ಗ್ಯಾಸ್‌ ಆಧಾರಿತ ಈ ಯಾಂತ್ರಿಕ ವ್ಯವಸ್ಥೆಯನ್ನು ಒಟ್ಟು ಆರು ಕಡೆಗಳಲ್ಲಿ ಮಾಡಿದ್ದಾರೆ. ಜತೆಗೆ ವಿಮಾನ ನಿಲ್ದಾಣದ ಆವರಣ ಗೋಡೆಗೆ ಅಲ್ಲಲ್ಲಿ ಒಟ್ಟು 17 ಭದ್ರತಾ ನಿಗಾಗೋಪುರ ನಿರ್ಮಿಸಲಾಗಿದೆ.

ವಿಮಾನ ನಿಲ್ದಾಣದೊಳಗೆ ಪಕ್ಷಿಗಳ ಹಾರಾಟ, ಪ್ರಾಣಿಗಳ ನುಸುಳುವಿಕೆ ತಡೆಗಟ್ಟಲು ಒಂದು ವರ್ಷ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅನುಮತಿ ಪಡೆದು ಟೆಂಡರ್‌ ಕರೆದು ಅಂತಿಮಗೊಳಿಸಲಾಗುವುದು. ಬೇರೆ ಬೇರೆ ನಿಲ್ದಾಣಗಳಲ್ಲಿ ಸಮೀಕ್ಷೆ ನಡೆದಿದೆ. ಹುಬ್ಬಳ್ಳಿಯಲ್ಲಿ ಇದೇ ಮೊದಲು ಈ ರೀತಿ ಸಮೀಕ್ಷೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ತಿಳಿಸಿದರು.