ಭರದಿಂದ ಸಾಗಿದ ವಿಮಾನ ನಿಲ್ದಾಣ ಉನ್ನತೀಕರಣ ಕಾಮಗಾರಿ

| Published : Dec 02 2024, 01:15 AM IST

ಸಾರಾಂಶ

ಕಳೆದ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿದ್ದ ವಿಮಾನ ನಿಲ್ದಾಣದ ಉನ್ನತೀಕರಣದ ಕಾಮಗಾರಿ ಭರದಿಂದ ಸಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಉನ್ನತೀಕರಣ ಕಾಮಗಾರಿ ಭರದಿಂದ ಸಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಒಂದೂವರೆ ವರ್ಷದಲ್ಲಿ ಪೂರ್ಣವಾಗಲಿದೆ. ವಿಮಾನ ನಿಲ್ದಾಣದ ಹೊರಗಿನ ವಿನ್ಯಾಸ ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದ ಮಾದರಿಯಲ್ಲಿ ಕಂಗೊಳಿಸಲಿದೆ. ಪ್ರಯಾಣಿಕರನ್ನು ಸ್ವಾಗತಿಸಲಿದೆ. ಕಳೆದ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿದ್ದ ವಿಮಾನ ನಿಲ್ದಾಣದ ಉನ್ನತೀಕರಣದ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಶೇ. 20-25ರಷ್ಟು ಪೂರ್ಣವಾಗಿದೆ. 2026ರ ಮಾರ್ಚ್‌ನಲ್ಲಿ ಪೂರ್ಣವಾಗಿ ಲೋಕಾರ್ಪಣೆಗೊಳ್ಳಲಿದೆ.

ಏನೇನು ಇರಲಿದೆ?

ಸದ್ಯ ಬರೀ 3600 ಚದರ್ ಮೀಟರ್‌ ಇರುವ ವಿಮಾನ ನಿಲ್ದಾಣ ಬರೋಬ್ಬರಿ 20 ಸಾವಿರ ಚದರ್‌ ಮೀಟರ್‌ ಆಗಲಿದೆ. ಸದ್ಯ 300 ಪ್ರಯಾಣಿಕರು ಏಕಕಾಲಕ್ಕೆ ನಿರ್ಗಮನ, ಆಗಮನದ ಸಾಮರ್ಥ್ಯ ಹೊಂದಿದೆ. ಹೊಸ ಟರ್ಮಿನಲ್‌ನಿಂದ 2400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. 3 ಏರ್‌ಕ್ರಾಫ್ಟ್‌ ಸ್ಟ್ಯಾಂಡಿಂಗ್‌ ಸಾಮರ್ಥ್ಯ ಇದೆ. ಹೊಸ ನಿಲ್ದಾಣದಲ್ಲಿ 10 ಏರ್‌ಕ್ರಾಫ್ಟ್‌ ಸ್ಟ್ಯಾಂಡಿಂಗ್‌ ಸಾಮರ್ಥ್ಯ ಇರಲಿದೆ. ಜತೆಗೆ ಸದ್ಯ ಒಂದೇ ಒಂದು ಏರೋಬ್ರಿಡ್ಜ್‌ ಇಲ್ಲ. ಹೊಸ ಟರ್ಮಿನಲ್‌ನಲ್ಲಿ ನಾಲ್ಕು ಏರೋಬ್ರಿಡ್ಜ್‌ ಬರಲಿದೆ. 250 ಕಾರ್‌ ಪಾರ್ಕಿಂಗ್‌ ಸಾಮರ್ಥ್ಯ ಇದೆ. ಇದನ್ನು 500ಕ್ಕೂ ಹೆಚ್ಚು ಕಾರ್‌ ಪಾರ್ಕಿಂಗ್‌ಗೆ ವ್ಯವಸ್ಥೆ ಇದೆ. ಈ ಎಲ್ಲ ಸೌಲಭ್ಯಕ್ಕೆ ತಕ್ಕಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಚೆಕ್‌ ಇನ್‌ ಕೌಂಟರ್‌, ಕೆಫೆಟೆರಿಯಾ ಆಗಲಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೆಲ್ಲ ಪ್ರಯಾಣಿಕರಿಗೆ ಹೊಸ ಟರ್ಮಿನಲ್‌ನಲ್ಲಿ ಲಭ್ಯವಾಗಲಿವೆ.

ಐತಿಹಾಸಿಕ ಪರಂಪರೆ

ಬರೀ ಇಷ್ಟೇ ಅಲ್ಲ. ವಿಮಾನ ನಿಲ್ದಾಣ ಮಾಮೂಲಿಯಂತೆ ಇರಲ್ಲ. ಬದಲಿಗೆ ಹುಬ್ಬಳ್ಳಿ ಐತಿಹಾಸಿಕತೆ, ಪರಂಪರೆ ಬಿಂಬಿಸುವ ಉಣಕಲ್‌ನ ಚಂದ್ರಮೌಳೇಶ್ವರ ದೇವಸ್ಥಾನದ ಪಿಲ್ಲರ್‌ನಂತೆ ವಿಮಾನ ನಿಲ್ದಾಣದ ಹೊರಗಿನ ಪಿಲ್ಲರ್‌ಗಳ ವಿನ್ಯಾಸ ಮಾಡಲಾಗುತ್ತಿದೆ. ಹೀಗಾಗಿ ವಿಮಾನ ನಿಲ್ದಾಣ ಐತಿಹಾಸಿಕತೆ, ಪರಂಪರೆಯನ್ನು ಪ್ರತಿಬಿಂಬಿಸುವಂತೆ ಕಂಗೊಳಿಸಲಿದ್ದು, ಪ್ರಯಾಣಿಕರನ್ನು ಸ್ವಾಗತಿಸಲಿದೆ. ₹300 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ನಿಲ್ದಾಣ ಉನ್ನತೀಕರಣ ಕಾಮಗಾರಿಯನ್ನು ನಾಸಿಕದ ಹರ್ಷ ಕನ್‌ಸ್ಟ್ರಕ್ಷನ್‌ನವರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶೇ. 20-25ರಷ್ಟು ಕಾಮಗಾರಿಯೆಲ್ಲ ಪೂರ್ಣವಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಉದ್ದಿಮೆದಾರರನ್ನು ಆಕರ್ಷಿಸಲು ವಿಮಾನ ನಿಲ್ದಾಣ ಸಹಕಾರಿ. ಈ ನಿಟ್ಟಿನಲ್ಲಿ ಇಲ್ಲಿನ ವಿಮಾನ ನಿಲ್ದಾಣ ಉನ್ನತೀಕರಣವಾಗುವುದರಿಂದ ಬರೀ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೂ ಪೂರಕವಾಗಲಿದೆ. ಉದ್ದಿಮೆಗಳು ಹೆಚ್ಚೆಚ್ಚು ಆಗಮಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಆದಷ್ಟು ಬೇಗನೆ ನಿಗದಿತ ಸಮಯದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.ಮಾರ್ಚ್‌ನಲ್ಲಿ ಪೂರ್ಣ

2024ರ ಮಾರ್ಚ್‌ನಲ್ಲಿ ವಿಮಾನ ನಿಲ್ದಾಣದ ಉನ್ನತೀಕರಣ ಕಾಮಗಾರಿ ಶುರುವಾಗಿದೆ. ಸರಿಸುಮಾರು ₹300 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 2026ರ ಮಾರ್ಚ್‌ನಲ್ಲಿ ಪೂರ್ಣವಾಗಲಿದೆ. ಉನ್ನತೀಕರಣದ ಕಾಮಗಾರಿ ಭರದಿಂದ ಸಾಗಿದೆ.

ರೂಪೇಶಕುಮಾರ, ನಿರ್ದೇಶಕರು, ಹುಬ್ಬಳ್ಳಿ ವಿಮಾನ ನಿಲ್ದಾಣ