ಬ್ಯಾಸ್ಗಿ ಕಳೆಯೋದು ಬಲು ಕಷ್ಟ ಐತ್ರಿ!

| Published : Apr 18 2024, 02:16 AM IST

ಸಾರಾಂಶ

ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಕಂಗೆಟ್ಟಿದ್ದಾರೆ.

ಬೇಸಿಗೆ ಬಗ್ಗೆ ನಿಟ್ಟುಸಿರು ಬೀಡುತ್ತಿರುವ ಜನಸಾಮಾನ್ಯರು । ಸೆಕೆ ಜತೆ ವಿದ್ಯುತ್ ಕಡಿತದ ಬಿಸಿಶಿವಮೂರ್ತಿ ಇಟಗಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸಾಹೇಬ್ರೆ,... ಈ ಬ್ಯಾಸ್ಗಿ ಕಳೆಯೋದು ತುಂಬಾ ತ್ರಾಸ್ ಐತ್ರಿ. ಸೂರ್ಯನ ಕಿರಣಗಳು ಮೈಯಲ್ಲ ಸುಡ್ತಾವೆ. ಸೆಕೆಯೋ ಸೆಕೆ, ನಿದ್ದೇನೂ ಬರುತ್ತಿಲ್ಲ, ಮನಸ್ಸಿಗೆ ನಮ್ಮೆದಿಯೂ ಸಿಗುತ್ತಿಲ್ಲ.....

ಇದು ತಾಲೂಕಿನಾದ್ಯಂತ ಬೇಸಿಗೆಯ ಬೇಗೆ ಬಗ್ಗೆ ಕೇಳಿ ಬರುತ್ತಿರುವ ಮಾತು. ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಕಂಗೆಟ್ಟಿದ್ದಾರೆ.

ಜಿಲ್ಲೆಯಲ್ಲಿ ಉಷ್ಣಾಂಶ ದಿನೇ ದಿನೇ ಹೆಚ್ಚುತ್ತಿದ್ದು, 38-39 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮುಂದಿನ ದಿನಗಳಲ್ಲಿ ೪೦ ತಲುಪುವ ಸಾಧ್ಯತೆ ಇದೆ. ಏರುತ್ತಿರುವ ತಾಪಮಾನದಿಂದ ಜನ ಹಾಗೂ ಜಾನುವಾರುಗಳು ತತ್ತರಿಸುವಂತಾಗಿದೆ.

ಬಿಸಿಲಿನ ತಾಪ ತಾಳದ ಜನತೆ:

ಬೆಳಗ್ಗೆಯಿಂದಲೇ ಉರಿ ಬಿಸಿಲಿನ ವಾತಾವರಣ ಹೊತ್ತೇರುತ್ತಿದ್ದಂತೆ ಬಿಸಿಲಿನ ತಾಪವೂ ಹೆಚ್ಚುತ್ತಾ ಹೋಗುತ್ತದೆ. ರಾತ್ರಿಯ ವೇಳೆಯೂ ತಂಪಾದ ವಾತಾವರಣ ಕಂಡು ಬರುತ್ತಿಲ್ಲ. ಫ್ಯಾನ್‌ನಿಂದಲೂ ಬಿಸಿ ಗಾಳಿ ಬರುತ್ತದೆ. ಉಷ್ಣ ಗಾಳಿಯಿಂದ ಬದುಕು ಬರ್ಬಾದ್‌ ಆಗಿದೆ. ಹೀಗಾದರೆ ಮುಂದಿನ ದಿನಗಳನ್ನು ಕಳೆಯುವುದು ಹೇಗೆ ಎಂಬ ಚಿಂತೆ ಸಾರ್ವಜನಿಕರನ್ನು ಕಾಡುತ್ತಿದೆ.

ಬಿಸಿಲು, ಮಳೆಗೆ ಅಂಜದ ರೈತರೂ ಸಹ ಬಿಸಿಲಿನ ತಾಪದ ಪರಿ ಕಂಡು ದಂಗಾಗಿದ್ದಾರೆ. ಬೆಳಗ್ಗೆ ೧೧ಗಂಟೆಯೊಳಗೆ ಕೃಷಿ ಕಾರ್ಯ ಪೂರೈಸಿ ಮನೆಗೆ ಮರಳುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಸುಡುಬಿಸಿಲಿನ ತಾಪಕ್ಕೆ ಊಟವೂ ಸೇರದು, ನಿದ್ದೆಯೂ ಬಾರದು. ಕೇವಲ ನೀರು ಕುಡಿದರೆ ಹೊಟ್ಟೆ ತುಂಬಿದಂತಾಗುತ್ತದೆ. ಹಸಿವೆಯೂ ಆಗುವುದಿಲ್ಲ ಎನ್ನುತ್ತಾರೆ ಜನರು.

ವಿದ್ಯುತ್ ಕಡಿತದ ಬಿಸಿ:

ಬಿಸಿಲು, ವಿಪರೀತ ಸೆಕೆಯಿಂದ ಜನರು ಬಳಲುತ್ತಿರುವಾಗ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ವಿದ್ಯುತ್ ಇಲ್ಲದಿರುವುದರಿಂದ ಫ್ಯಾನ್ ಬಳಸಲು ಸಾಧ್ಯವಾಗುತ್ತಿಲ್ಲ. ರಾತ್ರಿಯಂತೂ ವಿದ್ಯುತ್‌ ಕಡಿತದ ಬಿಸಿ ಜನರಿಗೆ ತಟ್ಟುತ್ತಿದೆ. ಸೆಕೆ ಜೊತೆ ಸೊಳ್ಳೆ ಕಾಟವೂ ಪಟ್ಟಣದಲ್ಲಿ ಹೆಚ್ಚುತ್ತಿದೆ.

ಪಟ್ಟಣದಲ್ಲಿ ಪ್ರತಿನಿತ್ಯ ಕನಿಷ್ಠ ೨೦ ತಾಸು ವಿದ್ಯುತ್ ನೀಡಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಕೇವಲ ೧೦-೧೨ ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ತಾರತಮ್ಯ ಏಕೆ.? ನಮಗೂ ಪಟ್ಟಣಕ್ಕೆ ನೀಡುವಷ್ಟು ವಿದ್ಯುತ್ ನೀಡಿ ಎಂಬುದು ಗ್ರಾಮೀಣ ಭಾಗದ ನಾಗರಿಕರ ಒತ್ತಾಯ.

ಗಗನಕ್ಕೇರಿದ ಎಳನೀರು ಬೆಲೆ:

ನೆತ್ತಿ ಸುಡುವ ಬಿಸಿಲಿನಿಂದಾಗಿ ಜನರು ಹಣ್ಣು, ತಂಪು ಪಾನೀಯಗಳ ಮೋರೆ ಹೋಗಿದ್ದು, ಅವುಗಳ ಬೆಲೆ ಗಗನಕ್ಕೇರಿದೆ. ಕಲ್ಲಂಗಡಿ ಹಣ್ಣಿನ ಬೆಲೆ ಕೆಜಿಗೆ ₹ ೩೫-೪೦ಕ್ಕೆ ತಲುಪಿದೆ. ₹ 30 ಇದ್ದ ಎಳನೀರು ಈಗ ₹೪೦ಕ್ಕೆ ಮಾರಾಟವಾಗುತ್ತಿದೆ. ಇನ್ನು ಐಸ್ ಕ್ರೀಂ, ಬದಾಮಿ ಹಾಲು, ಕೋಲ್ಡ್ ಡ್ರಿಂಕ್ಸ್ ಅಂಗಡಿಗಳಲ್ಲೂ ದರ ಹೆಚ್ಚಳವಾಗಿದೆ.

ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವುದರಿಂದ ಜನತೆ ಬೇಸಿಗೆ ಯಾವಾಗ ಹೋದಿತು ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗ್ಗೆ ೧೧ರಿಂದ ಸಂಜೆ ೫.೩೦ರ ವರೆಗೆ ರಸ್ತೆಗಳಲ್ಲಿ ಜನಸಂಚರ ವಿರಳವಾಗುತ್ತಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೆಲವರು ಕೊಡೆಯ ಮೊರೆ ಹೋಗಿದ್ದಾರೆ. ಈ ಹಿಂದೆ ಜನರ ಬಾಯರಿಕೆ ನೀಗಿಸಲು ಸಂಘ-ಸಂಸ್ಥೆಗಳು ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರವಟಿಕೆಗಳನ್ನು ಸ್ಥಾಪಿಸುತ್ತಿದ್ದವು. ಈಗ ಅದು ಕಡಿಮೆಯಾಗಿದ್ದು, ಪಟ್ಟಣಕ್ಕೆ ಬರುವ ಗ್ರಾಮೀಣ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.