ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿಯಲ್ಲಿ ಎಐಯುಟಿಯುಸಿ ನೇತೃತ್ವದಲ್ಲಿ ಆಶಾಗಳ ಪ್ರತಿಭಟನೆ

| Published : Mar 19 2025, 12:32 AM IST

ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿಯಲ್ಲಿ ಎಐಯುಟಿಯುಸಿ ನೇತೃತ್ವದಲ್ಲಿ ಆಶಾಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಚರ್ಚೆಯಂತೆ ಸುಗಮಕಾರರಿಗೆ ಹೆಚ್ಚಿನ ಗೌರವಧನ, ಪ್ರಯಾಣ ಭತ್ಯೆ ನೀಡಿ ಇವರಿಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಲು ಮರು ಆದೇಶ ಮಾಡಬೇಕು ಎಂದು ಆಗ್ರಹಿಸಲಾಯಿತು.

ಹಾವೇರಿ: ಮುಖ್ಯಮಂತ್ರಿಗಳು ಘೋಷಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹10 ಸಾವಿರ ಗೌರವಧನದ ಆದೇಶ ಮತ್ತು ಬಜೆಟ್‌ನಲ್ಲಿ ಘೋಷಿಸಿದ ₹1 ಸಾವಿರ ಹೆಚ್ಚಳದ ಆದೇಶ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಗಂಗಾಧರ ಬಡಿಗೇರ, ಕಳೆದ ಜ. 7ರಿಂದ 10ರ ವರೆಗೆ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೋರಾಟನಿರತ ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10 ಸಾವಿರ ಗೌರವಧನ ನೀಡುವ ಭರವಸೆ ನೀಡಿದ್ದರು.

ಇದನ್ನು ಹೊರತುಪಡಿಸಿ ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್‌ನಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ ₹10 ಸಾವಿರ ಗ್ಯಾರಂಟಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ 2 ತಿಂಗಳು ಕಳೆದರೂ ಈ ಭರವಸೆ ಈಡೇರಿಸಿಲ್ಲ. ಬಜೆಟ್‌ನಲ್ಲಿಯೂ ನಿಗದಿತ ಮಾಸಿಕ ಗೌರವಧನವನ್ನು ಏರಿಕೆ ಮಾಡಿಲ್ಲ ಎಂದರು.

ಸಂಘಟನೆ ಜಿಲ್ಲಾಧ್ಯಕ್ಷೆ ಜಯಶೀಲಾ ಎಸ್.ಬಿ. ಮಾತನಾಡಿ, ಮಾತು ಕೊಟ್ಟಂತೆ ಸೂಕ್ತ ಆದೇಶಗಳನ್ನು ಮಾಡುವ ಬದಲಾಗಿ, ಕಳೆದ 12 ವರ್ಷಗಳಿಂದ ಕೇವಲ ಮಾಸಿಕ ₹6 ಸಾವಿರಕ್ಕೆ ದುಡಿದ ಆಶಾ ಸುಗಮಕಾರರನ್ನು ಕೆಲಸದಿಂದ ಬಿಡುಗಡೆಯ ಆದೇಶ ಹೊರಡಿಸಿದ್ದು ಆಘಾತವನ್ನುಂಟು ಮಾಡಿದೆ.

ಹಿಂದಿನ ಚರ್ಚೆಯಂತೆ ಸುಗಮಕಾರರಿಗೆ ಹೆಚ್ಚಿನ ಗೌರವಧನ, ದಿನ- ಪ್ರಯಾಣ ಭತ್ಯೆ ನೀಡಿ ಇವರಿಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಲು ಮರು ಆದೇಶ ಮಾಡಬೇಕು. ಮತ್ತೊಂದು ಏಕಾಏಕಿ ಆದೇಶ ಮಾಡಿ, 60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಬಿಸಾಕಿದ್ದಾರೆ. ಅವರನ್ನು ದಿಢೀರನೆ ಬೀದಿಗೆ ತಳ್ಳಿದ್ದಾರೆ. ಇದು ನಿಜಕ್ಕೂ ಅತ್ಯಂತ ಅಮಾನವೀಯ. ವಿವಿಧ ರಾಜ್ಯಗಳಲ್ಲಿ ಇವರ ಸೇವೆಯ ವಯಸ್ಸು 62 ಇದ್ದು, ಕರ್ನಾಟಕ ರಾಜ್ಯದಲ್ಲಿಯೂ ನಿವೃತ್ತಿ ವಯಸ್ಸನ್ನು 62ಕ್ಕೆ ಮಾಡಿ ನಿವೃತ್ತಿ ಸೌಕರ್ಯಗಳನ್ನು ಜಾರಿ ಮಾಡಬೇಕು. ಈ ಕುರಿತು ಕೂಡ ಮರು ಆದೇಶ ಮಾಡಿ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ರತ್ನಾ ಗಿರಣಿ ಇತರರು ಇದ್ದರು.