ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಬೆಳವಡಿ ಮಲ್ಲಮ್ಮ ಇಂದಿನ, ಮುಂದಿನ ಪೀಳಿಗೆಗೆ ಎಂದೆಂದೂ ಸ್ಫೂರ್ತಿಯ ಸಲೆಯಾಗಿದ್ದಾರೆ. ರಾಣಿ ಮಲ್ಲಮ್ಮಳ ಶೂರತ್ವದ ಇತಿಹಾಸ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೆಳವಡಿ ಮಲ್ಲಮ್ಮನ ಉತ್ಸವ 2025ರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತನ್ನ ತಾಯಿ ನಾಡಿನ ರಕ್ಷಣೆಗಾಗಿ, ನಂಬಿದ ಪ್ರಜೆಗಳ ಸಂರಕ್ಷಣೆಗೆ ಮತ್ತು ಸಮಾಜದ ಉದ್ಧಾರಕ್ಕಾಗಿ, ಜೀವನ ಮುಡಿಪಾಗಿಡುವ ತ್ಯಾಗಿಗಳನ್ನು ಎಷ್ಟೇ ವರ್ಷಗಳು ಗತಿಸಿದರೂ ಜನ ಸ್ಮರಿಸುತ್ತಾರೆ ಎಂಬುದಕ್ಕೆ ಬೆಳವಡಿ ಮಲ್ಲಮ್ಮನ ಇತಿಹಾಸ ಉತ್ತಮ ಉದಾಹರಣೆ ಎಂದರು.
ಅಧ್ಯಕ್ಷತೆ ವಹಿಸಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ವೀರರಾಣಿ ಬೆಳವಡಿ ಮಲ್ಲಮ್ಮ ಮತ್ತು ಶೂರ ವಡ್ಡರ ಯಲ್ಲಣ್ಣನವರ ತ್ಯಾಗ ಬಲಿದಾನಗಳನ್ನು ಎಷ್ಟು ಹೇಳಿದರು ಸಾಲದು. ಅವರ ಶೌರ್ಯ ಸಾಹಸದ ಗುಣಗಳು ಎಲ್ಲರಿಗೂ ಆದರ್ಶವಾಗಿವೆ. ಈ ನಾಡಿನ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ಅತ್ಯವಶ್ಯವಿದ್ದು, ಈ ಹಿನ್ನೆಲೆಯಲ್ಲಿ ರಾಣಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಸರಕಾರದಿಂದ ಶೀಘ್ರ ಘೋಷಣೆಯಾಗಲಿದೆ ಎಂದು ಭರವಸೆ ನೀಡಿದರು.ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿ, ಕನ್ನಡ ನಾಡ ರಕ್ಷಣೆಗೆ ಹೋರಾಡಿದ ರಾಣಿ ಮಲ್ಲಮ್ಮಳ ಶೌರ್ಯ ಸಾಹಸ ರಾಷ್ಟ್ರಾದ್ಯಂತ ಪ್ರಚಾರಗೊಳ್ಳಲು ಸರಕಾರ ಆದಷ್ಟು ಶೀಘ್ರ ರಾಣಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ರಾಣಿ ಮಲ್ಲಮ್ಮಳ ಹೆಸರು ಚಿರಸ್ಥಾಯಿಯಾಗೊಳಿಸಲು ಮುಂದಾಗಬೇಕು. ಸರಕಾರ ಈ ವಿಷಯದಲ್ಲಿ ಇನ್ನು ಮುಂದೆ ಉದಾಸೀನ ತೋರಿದರೆ ಮುಂದಿನ ದಿನಗಳಲ್ಲಿ ಬೆಳವಡಿ ಜನತೆ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದೆ ಎಂದು ವೇದಿಕೆ ಮೇಲಿದ್ದ ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಕೈ ಮುಗಿದು ವಿನಂತಿಸಿದರು.
ಇದೇ ವೇದಿಕೆಯಲ್ಲಿ 2025ನೇ ವರ್ಷದ ರಾಣಿ ಮಲ್ಲಮ್ಮ ಪ್ರಶಸ್ತಿಯನ್ನು ಮಾದರಿ ಮಹಿಳಾ ರೈತ ಉದ್ಯಮಿ ಕವಿತಾ ಮೀಶ್ರಾ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸಾಹಿತಿ ಯ.ರು.ಪಾಟೀಲ ರಚಿತ ನೆಲದ ಧ್ವನಿ ಶೂರ ಬೆಳವಡಿ ವಡ್ಡರ ಯಲ್ಲಣ್ಣ ಕೃತಿ ಮತ್ತು ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದವರ ವೀರರಾಣಿ ಮಲ್ಲಮ್ಮ ಐತಿಹಾಸಿಕ ದಾಖಲೆಗಳ ಸಂಗ್ರಹ ಗ್ರಂಥಗಳು ಗಣ್ಯರಿಂದ ಬಿಡುಗಡೆಗೊಂಡವು.ಬೆಳವಡಿ ಮಲ್ಲಮ್ಮನ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಉಪಾಧ್ಯಕ್ಷೆ ಸಂಗೀತಾ ಕನೇಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳವಡಿ ಗ್ರಾಪಂನ ಸದಸ್ಯರು, ನಾನಾ ಇಲಾಖೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು. ಬೈಲಹೊಂಗಲ ತಹಶೀಲದಾರ ಹಣಮಂತ ಶಿರಹಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಎಮ್.ಪಿ.ಉಪ್ಪಿನ, ಸೃಷ್ಠಿ ತಡಕೋಡ ನಿರೂಪಿಸಿದರು.