ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠ ಹಿಂದೂಗಳ ಮಠವಾದರೂ ಭಾವೈಕ್ಯತೆಯ ತಾಣ. ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೈಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳು ದಿನನಿತ್ಯ ಪೂಜಿಸಲ್ಪಡುತ್ತವೆ.

ಫಕೃದ್ದೀನ ಎಂ.ಎನ್.

ನವಲಗುಂದ:

ಪಟ್ಟಣದ ಅಜಾತ ನಾಗಲಿಂಗ ಶ್ರೀಗಳ 145ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ಜು. 18ರಂದು ಹಾಗೂ ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ಜು. 19ರಂದು ವಿಜೃಂಭಣೆಯಿಂದ ಜರುಗಲಿದೆ.

ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠ ಹಿಂದೂಗಳ ಮಠವಾದರೂ ಭಾವೈಕ್ಯತೆಯ ತಾಣ. ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೈಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳು ದಿನನಿತ್ಯ ಪೂಜಿಸಲ್ಪಡುತ್ತವೆ.

ಹುಬ್ಬಳ್ಳಿಯ ಸಿದ್ಧಾರೂಢರು, ಹೊಸಳ್ಳಿ ಬೂದೀಶ್ವರ ಶ್ರೀಗಳು, ಗರಗದ ಮಡಿವಾಳಜ್ಜನವರು, ಶಿಶುನಾಳ ಶರೀಫರು ಮೊದಲಾದ ಶರಣರು ಹಾಗೂ ಸಂತ ಮಹಾಪುರುಷರೊಡಗೂಡಿ ನಾಗಲಿಂಗಜ್ಜನವರು ಮಾಡಿದ ಪವಾಡಗಳನ್ನು ಇಲ್ಲಿನ ಹಿರಿಯರು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅಜ್ಜನವರು 1881ರಲ್ಲಿ ಜೀವಂತ ಸಮಾಧಿ ಹೊಂದಿದ್ದಾರೆ.

ಆಂಗ್ಲರು ತಮ್ಮ ಆಡಳಿತ ಅವಧಿಯಲ್ಲಿ ಬೈಬಲ್ ಪ್ರಚಾರ ಮಾಡಲು ಮುಷ್ಟಿಗಿರಿ ಕಾಳಪ್ಪ ಎಂಬಾತನಿಗೆ ಬೈಬಲ್‌ ನೀಡಿದ್ದರು. ಗ್ರಾಮದೇವತೆ ಗುಡಿಯಲ್ಲಿ ಬೈಬಲ್ ಓದುತ್ತಿದ್ದಾಗ ನಾಗಲಿಂಗ ಶ್ರೀಗಳು ಆಗಮಿಸಿದ್ದನ್ನು ನೋಡಿ ಅವರು ಬೈಯ್ಯುತ್ತಾರೆಂದು ಬೈಬಲ್‌ನ್ನು ಮುಚ್ಚಿಟ್ಟಿದ್ದರು. ಆಗ ಆ ಬೈಬಲ್‌ನ್ನು ಅಜ್ಜನವರು ತರಿಸಿಕೊಂಡು ರಂಧ್ರ ಹಾಕಿ ಈ ರಂಧ್ರ ಮುಚ್ಚಿದಾಗ ಮತ್ತೆ ಆವತರಿಸಿ ಬರುವೆನೆಂದು ಹೇಳಿದ್ದರು. ಇಂದಿಗೂ ಆ ಬೈಬಲ್ ಶ್ರೀಮಠದಲ್ಲಿ ಪೂಜಿಸಲ್ಪಡುತ್ತಿದೆ.

ಅಜ್ಜನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ, ಶ್ರದ್ಧೆಗಳ ಸಮ್ಮೇಳನವಾಗಿದೆ. ಶ್ರೀಗಳ ಸಂಕಲ್ಪದಂತೆ ಇಂದಿನ ಪೀಠಾಧಿಪತಿಯಾದ ವೀರೇಂದ್ರ ಸ್ವಾಮೀಜಿ ಮಠವನ್ನು ಧಾರ್ಮಿಕ ಕಾರ್ಯಕಲಾಪಗಳಿಗೆ ಸೀಮಿತಗೊಳಿಸದೇ ಶೈಕ್ಷಣಿಕ- ಸಾಂಸ್ಕೃತಿಕ- ಸಾಮಾಜಿಕವಾಗಿ ಬೆಳೆಸಿದ್ದಾರೆ.

ರಾಯಚೂರು ಜಿಲ್ಲೆಯ ಜಾವಳಗೇರಿ ಗ್ರಾಮದ ಮೌನಾಚಾರ್ಯ ಹಾಗೂ ನಾಗಮ್ಮ ದಂಪತಿ ಮಗನಾಗಿ ಬೆಳೆದು ಬಾಲ್ಯದಲ್ಲಿಯೇ ವೈರಾಗ್ಯ ಹೊಂದಿ ಸನ್ಯಾಸಿ ದೀಕ್ಷೆ ಪಡೆದು, ಲೋಕದ ಕಲ್ಯಾಣಕ್ಕಾಗಿ ಮನೆ ಬಿಟ್ಟು ಬಂದು ನವಲಗುಂದದಲ್ಲಿ ನೆಲೆಸಿದರು.

ಈಗಿನ ಪೀಠಾಧಿಪತಿಗಳಾದ ವೀರೇಂದ್ರ ಶ್ರೀಗಳು ಎಂ.ಎ. ಸಂಸ್ಕೃತ ಹಾಗೂ ಯೋಗ ಪದವೀಧರರಾಗಿದ್ದು, ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗೆ ಸಂಸ್ಕೃತ ಕಲಿಸುತ್ತಾರೆ. ಪ್ರೌಢಶಾಲೆ ಮತ್ತು ಐಟಿಐ ಕಾಲೇಜನ್ನು ನಡೆಸುತ್ತಿದ್ದು, ಅವು ಪ್ರಗತಿಪಥದಲ್ಲಿವೆ. ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿವೆ.

ಶ್ರೀಮಠದಲ್ಲಿ ನಿತ್ಯ ಅನ್ನದಾಸೋಹದ ಜತೆಗೆ ಯಾತ್ರಿ ನಿವಾಸಗಳ ವ್ಯವಸ್ಥೆಯಿದ್ದು, ಯೋಗ ಶಿಬಿರ, ಆರೋಗ್ಯ ಶಿಬಿರಗಳನ್ನು ವಿಶೇಷ ಸಂದರ್ಭಗಳಲ್ಲಿ ಆಯೋಜಿಸುತ್ತಾ ಬಂದಿದ್ದಾರೆ. ಗೋಶಾಲೆ ನಡೆಸುತ್ತಿದ್ದು, ವಿವಿಧ ಜಾತಿಯ ದೇಸಿ ಗೋವುಗಳನ್ನು ಸಾಕಿದ್ದಾರೆ.

ಶ್ರೀ ಮಠದಲ್ಲಿ ಭಕ್ತರ ಸೇವೆ ಅಗಾಧ. ಯಾವುದೇ ಜಾತಿ, ಮತ, ಭೇದವಿಲ್ಲದೆ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಸಕಲ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ.

ಎನ್.ಎಚ್. ಕೋನರಡ್ಡಿ ಶಾಸಕರು