ಸಾರಾಂಶ
ಮಡಬೂರಿನ ಅವರ ಮನೆಯಲ್ಲಿ ಅಂತಿಮ ದರ್ಶನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಜಾತ ಶತ್ರು, ಮುತ್ಸದ್ದಿ ರಾಜಕಾರಣಿ, ಚಿಂತಕ ಮಡಬೂರು ರಾಜೇಂದ್ರ ( 70) ಭಾನುವಾರ ರಾತ್ರಿ ನಿಧನರಾದರು. ಅವರು ಪತ್ನಿ, ಒಬ್ಬ ಪುತ್ರ, 4 ಸಹೋದರಿಯರು, ಒಬ್ಬ ಸಹೋದರರನ್ನು ಅಗಲಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಂದ್ರ ಅವರಿಗೆ ಭಾನುವಾರ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಸೋಮವಾರ ಮಧ್ಯಾಹ್ನ 12 ಗಂಟೆವರೆಗೂ ಮಡಬೂರಿನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡ ಲಾಗಿತ್ತು. ನಂತರ ನರಸಿಂಹರಾಜಪುರ ಪಟ್ಟಣದ ದೀಪ್ತಿ ಸರ್ಕಲ್ ನಿಂದ ಪಟ್ಟಣದ ಡಿಸಿಎಂಸಿ ಶಾಲೆವರೆಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರ ತರಲಾಯಿತು. ಡಿಸಿಎಂಸಿ ಶಾಲೆ ಸಭಾ ಭವನದಲ್ಲಿ ಶಾಲೆ ಮಕ್ಕಳಿಗೆ, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮಡಬೂರಿನ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.ಅಂತಿಮ ದರ್ಶನ ಪಡೆದವರಲ್ಲಿ ಶಾಸಕ ಟಿ.ಡಿ.ರಾಜೇಗೌಡ, ವಿಪ ಸದಸ್ಯರಾದ ಬೋಜೇಗೌಡ, ಸಿ.ಟಿ.ರವಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್,ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ ಪ್ರಮುಖರು. ವಿಶೇಷವಾಗಿ ಪಕ್ಷ ಬೇದವಿಲ್ಲದೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಎಚ್.ಟಿ.ರಾಜೇಂದ್ರ ಅವರ ಅಂತಿಮ ದರ್ಶನ ಪಡೆದರು.
ದೇವೇಗೌಡರ ನಿಕಟವರ್ತಿ: ಎಚ್.ಟಿ.ರಾಜೇಂದ್ರ ಪ್ರಾರಂಭದಿಂದಲೂ ಜೆಡಿಎಸ್ ನಲ್ಲೇ ಗುರುತಿಸಿಕೊಂಡಿದ್ದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಶಿಕ್ಷಣ ಸಚಿವ ಎಚ್.ಡಿ.ಗೋವಿಂದೇಗೌಡ ಅವರ ನಿಕಟವರ್ತಿಗಳಾಗಿದ್ದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು 1999 ರಿಂದ 2004 ರ ವರೆಗೆ ಜಿಪಂ ನ ಶಿಕ್ಷಣ, ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, 2 ಬಾರಿ ಜೆಡಿಎಸ್ ನಿಂದ ಶೃಂಗೇರಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವ ಗೊಂಡಿದ್ದರು. ರೋಟರಿ ಕ್ಲಬ್ ಅಧ್ಯಕ್ಷರಾಗಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಡಿಸಿಎಂಸಿ ಶಾಲೆ ಹರಿಕಾರ: ತಾಲೂಕು ಒಕ್ಕಲಿಗರ ಸಂಘ ನಡೆಸುತ್ತಿರುವ ಪಟ್ಟಣದ ಪ್ರತಿಷ್ಠಿತ ಡಿಸಿಎಂಸಿ ಪ್ರೌಢ ಶಾಲೆ (ಶಾರದಾ ವಿದ್ಯಾಮಂದಿರ ) ಸ್ಥಾಪಕ ಕಾರ್ಯದರ್ಶಿಯಾಗಿ ಎಚ್.ಟಿ.ರಾಜೇಂದ್ರ ಸತತ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲೆ ಪ್ರಗತಿಗೆ ಶ್ರಮಿಸಿದ್ದರು. ಕಳೆದ 3 ವರ್ಷದಿಂದ ಡಿಸಿಎಂಸಿ ಶಾಲೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ವೈಜ್ಞಾನಿಕ ಚಿಂತನೆ ಮಾಡುತ್ತಿದ್ದ ಎಚ್.ಟಿ.ರಾಜೇಂದ್ರ ಮೂಡನಂಬಿಕೆಗಳನ್ನು ವಿರೋದಿಸುತ್ತಿದ್ದರು. ರಾಜ್ಯ ವೈಜ್ಞಾನಿಕ ಪರಿಷತ್ ನಿಂದ ಡಾ.ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಡಬೂರಿನ ತಮ್ಮ ಮನೆಯಲ್ಲಿ ಪುಟ್ಟ ಗ್ರಂಥಾಲಯ ಹೊಂದಿದ್ದ ಅವರು ಸಾಕಷ್ಟು ಪುಸ್ತಕ ಓದುತ್ತಿದ್ದರು. ಅಜಾತ ಶತ್ರುವಾಗಿದ್ದ ಎಚ್.ಟಿ.ರಾಜೇಂದ್ರ ತಳಮಟ್ಟದಿಂದಲೇ ನಾಯಕರಾಗಿ ಬೆಳೆದಿದ್ದು ಅಧಿಕಾರ ಇಲ್ಲದಿದ್ದರೂ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದು ಜನ ಸದಾ ಎಚ್.ಟಿ.ರಾಜೇಂದ್ರ ಅವರ ಮಾರ್ಗದರ್ಶನ ಪಡೆಯುತ್ತಿದ್ದರು.
--- ಬಾಕ್ಸ್---ಫಲಿಸದ ಅಪೇಕ್ಷೆ
ಮುತ್ಸದ್ದಿತನ ,ಪ್ರಾಮಾಣಿಕ ರಾಜಕಾರಣಿ ಎಂದೇ ಹೆಸರು ಪಡೆದಿದ್ದರೂ ಎಚ್.ಟಿ.ರಾಜೇಂದ್ರ ಅವರಿಗೆ ಅದೃಷ್ಟ ಮಾತ್ರ ಕೈ ಕೊಡುತ್ತಾ ಹೋಗಿ ನರಸಿಂಹರಾಜಪುರ ಜನರು ಅಪೇಕ್ಷೆ ಪಟ್ಟಿದ್ದ ಶಾಸಕ ಸ್ಥಾನ ಕೊನೆಗೂ ಒಲಿದು ಬರಲಿಲ್ಲ. ಕನಿಷ್ಠ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಿರೀಕ್ಷೆ ಮಾಡಿದ್ದರೂ ಅದು ಕೂಡ ಕೊನೆಗೂ ಹುಸಿಯಾಯಿತು.