ಅಜಾತಶತ್ರು ಡಿ.ಬಿ. ಚಂದ್ರೇಗೌಡ ಪಂಚಭೂತಗಳಲ್ಲಿ ಲೀನ

| Published : Nov 09 2023, 01:00 AM IST / Updated: Nov 09 2023, 01:01 AM IST

ಅಜಾತಶತ್ರು ಡಿ.ಬಿ. ಚಂದ್ರೇಗೌಡ ಪಂಚಭೂತಗಳಲ್ಲಿ ಲೀನ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ, ಅಜಾತಶತ್ರು ಡಿ.ಬಿ. ಚಂದ್ರೇಗೌಡ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಚಂದ್ರೇಗೌಡರ ಹಿರಿಯ ಪುತ್ರಿ ವೀಣಾ ಅಗ್ನಿ ಸ್ಪರ್ಶಿಸಿದರು. ಅವರು ಪಂಚಭೂತಗಳಲ್ಲಿ ಲೀನರಾದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಮಧ್ಯರಾತ್ರಿ ನಿಧನರಾಗಿದ್ದರು. ಮಂಗಳವಾರ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ, ಅಂತಿಮ ದರ್ಶನಕ್ಕೆ ಆಗಮಿಸಿದ ಗಣ್ಯರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಮಾಜಿ ಸಚಿವ, ಅಜಾತಶತ್ರು ಡಿ.ಬಿ. ಚಂದ್ರೇಗೌಡ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಚಂದ್ರೇಗೌಡರ ಹಿರಿಯ ಪುತ್ರಿ ವೀಣಾ ಅಗ್ನಿ ಸ್ಪರ್ಶಿಸಿದರು. ಅವರು ಪಂಚಭೂತಗಳಲ್ಲಿ ಲೀನರಾದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಮಧ್ಯರಾತ್ರಿ ನಿಧನರಾಗಿದ್ದರು. ಮಂಗಳವಾರ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ದಾರದಹಳ್ಳಿಯ ಮುಖ್ಯ ರಸ್ತೆಯಲ್ಲಿರುವ ಪೂರ್ಣಚಂದ್ರ ಕಾಫಿ ಎಸ್ಟೇಟ್‌ನ ಅವರ ಮನೆಯ ಅಂಗಳದಲ್ಲಿ ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೆಳಗ್ಗೆ ಆಗಮಿಸಿ ಅಂತಿಮ ದರ್ಶನ ಪಡೆದು ಕೆಲ ಸಮಯ ಇದ್ದು, ವಾಪಸ್ ತೆರಳಿದರು. ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ ಅವರು ಬೆಳಗ್ಗೆಯಿಂದಲೇ ಚಂದ್ರೇಗೌಡರ ನಿವಾಸದಲ್ಲಿದ್ದರು. 11.30 ರ ವೇಳೆಗೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ಎನ್. ಜೀವರಾಜ್ ಆಗಮಿಸಿ ಅಂತಿಮ ದರ್ಶನ ಪಡೆದರು. ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಮಾಜಿ ಸಚಿವರಾದ ಡಾ.ಬಿ.ಎಲ್. ಶಂಕರ್, ಬಿ.ಬಿ.ನಿಂಗಯ್ಯ, ಡಾ. ಮೋಟಮ್ಮ ಆಗಮಿಸಿದರು. ಬಳಿಕ ಮಧ್ಯಾಹ್ನ 12.40 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಚಂದ್ರೇಗೌಡರ ಪತ್ನಿ ಪೂರ್ಣಿಮಾ ಹಾಗೂ ಅವರ ನಾಲ್ವರು ಪುತ್ರಿಯರಿಗೆ ಸಾಂತ್ವನ ಹೇಳಿದರು. ಶಾಸಕರುಗಳಾದ ಟಿ.ಡಿ. ರಾಜೇಗೌಡ, ಜಿ.ಎಚ್. ಶ್ರೀನಿವಾಸ್, ಎಚ್.ಡಿ. ತಮ್ಮಯ್ಯ, ಆನಂದ್, ನಯನಾ ಮೋಟಮ್ಮ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಆರಗ ಜ್ಞಾನೇಂದ್ರ ಆಗಮಿಸಿ ಅಂತಿಮ ದರ್ಶನ ಪಡೆದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಬಿ.ಚಂದ್ರೇಗೌಡ ಅವರ ಪತ್ನಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿ ಕೆಲ ಸಮಯ ಆಸಿನರಾಗಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಮುಖ್ಯಮಂತ್ರಿಯವರು ಚಂದ್ರೇಗೌಡರ ಮನೆಯಿಂದ ನಿರ್ಗಮಿಸಿದರು. ಬಳಿಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಚಂದ್ರೇಗೌಡರ ನಿಕಟವರ್ತಿಗಳು, ಸಂಬಂಧಿಕರು ಅಂತಿಮ ದರ್ಶನ ಪಡೆದರು. ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ದಾರದಹಳ್ಳಿಯ ಸ್ವಗೃಹದ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಹಿರಿಯ ಪುತ್ರಿ ವೀಣಾ ಅವರು ಅಗ್ನಿಸ್ಪರ್ಶ ಮಾಡಿದ ಬಳಿಕ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಸತತ 47 ವರ್ಷಗಳ ಕಾಲ ರಾಜಕಾರಣದಲ್ಲಿದ್ದ ಮುತ್ಸದ್ಧಿ ರಾಜಕಾರಣಿಯನ್ನು ಕಾಫಿಯ ನಾಡು ಕಳೆದುಕೊಂಡಿತು. -------------------------------------

ಚಂದ್ರೇಗೌಡರು ಒಳ್ಳೆಯ ಸ್ಪೀಕರ್: ಸಿದ್ದರಾಮಯ್ಯ

ಚಿಕ್ಕಮಗಳೂರು: ಡಿ.ಬಿ.ಚಂದ್ರೇಗೌಡರು ಒಳ್ಳೆಯ ಸ್ಪೀಕರ್ ಎಂದು ಪ್ರಶಂಸೆ ಪಡೆದುಕೊಂಡಿದ್ದರು. ಏಕೆಂದರೆ ಆಗಿನ ಕಾಲದಲ್ಲಿ ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಠಿಣವಾಗಿತ್ತು. ಬಿಜೆಪಿ ಬೆಂಬಲ ಪಡೆದು ರಾಮಕೃಷ್ಣ ಹೆಗ್ಡೆ ಸಿಎಂ ಆಗಿದ್ದರು. ಆಗ ಚಂದ್ರೇಗೌಡ ಸ್ಪೀಕರ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿಕೊಂಡರು. ಮೂಡಿಗೆರೆಯ ದಾರದಹಳ್ಳಿಯಲ್ಲಿ ಚಂದ್ರೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ತೆರಳುವ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿ ಇದ್ದರು. ಮತ್ತೆ ಕಾಂಗ್ರೆಸ್ ಸೇರಿ ಶಾಸಕ ಹಾಗೂ ಮಂತ್ರಿಯೂ ಆಗಿದ್ದರು. ಅವರು ರಾಜಕೀಯವಾಗಿ ನಾಲ್ಕು ಸದನದಲ್ಲೂ ಸದಸ್ಯರಾಗಿದ್ದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ನ ಸದಸ್ಯರಾಗಿದ್ದರು. ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗುವುದು ತೀರಾ ಅಪರೂಪ ಎಂದು ಹೇಳಿದರು. ಪ್ರಜಾಪ್ರಭುತ್ವದ ನಾಲ್ಕು ವೇದಿಕೆಯಲ್ಲೂ ಇದ್ದರು. 87 ವರ್ಷದ ಅವರು ನಮ್ಮನ್ನು ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದು ಸಿದ್ದರಾಮಯ್ಯ ಸಾಂತ್ವನಗಳನ್ನು ತಿಳಿಸಿದರು. ಮೂರು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದರು ಎಂದು ಹೇಳಿದರು. -------------------------