ಅಜ್ಜೀಬಳ ಗೋಶಾಲೆಗೆ ಅನುದಾನವಿಲ್ಲದೆ ಅನಾಥ

| Published : Mar 11 2025, 12:49 AM IST

ಸಾರಾಂಶ

ಪ್ರತಿ ತಿಂಗಳ ನಿರ್ವಹಣೆಗೆ ಸರ್ಕಾರದ ಅನುದಾನದ ಕೊರತೆಯಿಂದ ಉದ್ಘಾಟನೆಗೊಳ್ಳದೇ ಗೋಶಾಲೆ ಆರಂಭಕ್ಕೆ ಹಿನ್ನಡೆಯಾಗಿದೆ.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಅನಾಥ, ವಧೆಗೆ ಸಾಗಿಸುವ ವೇಳೆ ರಕ್ಷಣೆಗೊಳಪಟ್ಟ ದನ-ಕರುಗಳಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ತಾಲೂಕಿನ ಅಜ್ಜೀಬಳದಲ್ಲಿ ಲಕ್ಷಾಂತರ ರು. ವಿನಿಯೋಗಿಸಿ, ನಿರ್ಮಿಸಲಾದ ಗೋಶಾಲೆಗೆ ಹಾಲಿ ಸರ್ಕಾರದ ಅವಧಿಯಲ್ಲಿ ಅನುದಾನದ ಕೊರತೆ ಎದುರಾಗಿದೆ.

ಜಾನುವಾರುಗಳಿಗೆ ಆಶ್ರಯ ನೀಡಲು ಪ್ರತಿ ತಾಲೂಕಿನಲ್ಲಿಯೂ ಗೋಶಾಲೆ ನಿರ್ಮಿಸುವ ಗುರಿ ಹೊಂದಿದ್ದ ಹಿಂದಿನ ಸರ್ಕಾರವು ಶಿರಸಿ ತಾಲೂಕಿನ ಅಜ್ಜೀಬಳದಲ್ಲಿ ಗೋಶಾಲೆ ನಿರ್ಮಾಣಕ್ಕೆ ಸುಮಾರು ೭ ಎಕರೆ ಜಾಗ ಗುರುತಿಸಿ, ₹೫೦ ಲಕ್ಷ ಅನುದಾನ ನೀಡಿತ್ತು. ಹಿಂದೆ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಗೋಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದ್ದರು. ಒಂದು ವರ್ಷದ ಹಿಂದೆಯೇ ಕಟ್ಟಡ ಪೂರ್ಣಗೊಂಡಿದೆ. ಪ್ರತಿ ತಿಂಗಳ ನಿರ್ವಹಣೆಗೆ ಸರ್ಕಾರದ ಅನುದಾನದ ಕೊರತೆಯಿಂದ ಉದ್ಘಾಟನೆಗೊಳ್ಳದೇ ಗೋಶಾಲೆ ಆರಂಭಕ್ಕೆ ಹಿನ್ನಡೆಯಾಗಿದೆ.

ಉದ್ಘಾಟನೆಗೆ ರೆಡಿ:

ಗೋಶಾಲೆಯಲ್ಲಿ ಗರಿಷ್ಠ ನೂರು ಗೋವುಗಳಿಗೆ ಆಶ್ರಯ ನೀಡಬಹುದು. ಈ ಪ್ರದೇಶದಲ್ಲಿ ಗೋವುಗಳಿಗೆ ಮೇವು ಒದಗಿಸಲು ಹುಲ್ಲುಗಾವಲು, ಬೇಲಿ ವ್ಯವಸ್ಥೆ, ೫೦ ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ರಚನೆ, ವಿದ್ಯುತ್, ಬೋರ್‌ವೆಲ್‌ ಮೂಲಕ ನೀರಿನ ವ್ಯವಸ್ಥೆ, ಗೋ ಕಟ್ಟೆಗಳ ನಿರ್ಮಾಣ, ಮೇವು ಸಂಗ್ರಹಣಾ ಗೋದಾಮು, ಪಶು ವೈದ್ಯಾಧಿಕಾರಿಗಳ ವಸತಿಗೃಹಗಳೆಲ್ಲ ಸೇರಿದಂತೆ ಸಂಪೂರ್ಣ ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಬಣ್ಣದಿಂದ ಕಂಗೊಳಿಸುತ್ತಿದೆ.

ಗೋವುಗಳ ನಿರ್ವಹಣೆಗೆ ಕನಿಷ್ಠ ₹೫-೬ ಲಕ್ಷ ಪ್ರತಿ ತಿಂಗಳು ಬೇಕಾಗುತ್ತದೆ. ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುವಂತೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ೨ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಲಭ್ಯತೆಯಿಲ್ಲ ಎಂದು ವಾಪಸ್ ಪತ್ರ ಬಂದಿದೆ. ಒಮ್ಮೆ ಆರಂಭಗೊಳಿಸಿದರೆ ಪ್ರತಿ ತಿಂಗಳೂ ನಿರ್ವಹಣೆಗೆ ಅನುದಾನ ಅವಶ್ಯವಾಗಿದೆ. ಅನುದಾನ ಲಭ್ಯವಾದರೆ ಉದ್ಘಾಟನೆಗೊಳಿಸಿ, ಆರಂಭಕ್ಕೆ ಪ್ರಯತ್ನಿಸಲಾಗುವುದು ಎಂದು ಪಶುಪಾಲನೆ, ಪಶು ವೈದ್ಯಕೀಯ ಸೇವಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಾಲಿ ಗೋಶಾಲೆಗೂ ಅನುದಾನ ಕೊರತೆ:

ಹಳಿಯಾಳ ತಾಲೂಕಿನಲ್ಲಿ ಇಲಾಖೆಯಿಂದ ಗೋಶಾಲೆ ನಡೆಸಲಾಗುತ್ತಿದೆ. ಅಲ್ಲಿ ಸುಮಾರು ೧೩೦ ಗೋವುಗಳು ಆಶ್ರಯ ಪಡೆಯುತ್ತಿವೆ. ಅವುಗಳ ನಿರ್ವಹಣೆಗೂ ಸರ್ಕಾರ ಅನುದಾನ ನೀಡದ ಕಾರಣ ಸಾಕಾಣಿಕೆ ಕಷ್ಟಸಾಧ್ಯವಾಗಿದೆ.ಗೋಶಾಲೆಯ ಕಟ್ಟಡ ಪೂರ್ಣಗೊಂಡಿದೆ. ನಿರ್ವಹಣೆಯ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಲಭ್ಯತೆಯ ನಂತರ ಗೋ ಶಾಲೆ ಆರಂಭಿಸಲಾಗುತ್ತದೆ ಎನ್ನುತ್ತಾರೆ ಪಶು ಪಾಲನೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಕೆ.ಎಂ. ಮೋಹನಕುಮಾರ.ಅಧಿಕಾರದಲ್ಲಿರುವ ಸರ್ಕಾರ ಒಂದು ಉದ್ದೇಶಕ್ಕೋಸ್ಕರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಬದಲಾದ ಸರ್ಕಾರ ಆ ಯೋಜನೆಯ ಸಾಕಾರಗೊಳಿಸಲು ಅನುದಾನ ನೀಡುವುದಿಲ್ಲ. ಇದೇ ಪರಿಸ್ಥಿತಿ ಅಜ್ಜೀಬಳದಲ್ಲಿ ಪಶುಪಾಲನೆ, ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಲಾದ ಗೋಶಾಲೆಗೂ ಅನುದಾನದ ಕೊರತೆಯಿಂದ ಇನ್ನು ಆರಂಭಗೊಂಡಿಲ್ಲ. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಮಂಜೂರು ಮಾಡಿ ಗೋಶಾಲೆ ಆರಂಭಿಸಬೇಕು ಎನ್ನುತ್ತಾರೆ ಗೋಪ್ರೇಮಿ ಸುಭಾಸ ಭಟ್ಟ ಯಡಳ್ಳಿ.