ಸಾರಾಂಶ
ಮೀನು ಮಾರುಕಟ್ಟೆ, ಸಾಲರಜಂಗ್ ರಸ್ತೆ, ಮಟನ್ ಮಾರ್ಕೆಟ್ ಸೇರಿದಂತೆ ಮೊದಲಾದ ಕಡೆ ವಿಪರೀತ ಗಲೀಜು ಇತ್ತು. ಇದೆಲ್ಲ ಸ್ವಚ್ಛ ಮಾಡಿ, ಅಲ್ಲಿ ಗಲೀಜು ಮಾಡದಂತೆ ಕಟ್ಟೆಚ್ಚರ ನೀಡಿದ್ದಾರೆ. ವಾರ್ಡ್‌ಗಳಲ್ಲಿ ನೀರು ಬಂದಿಲ್ಲ ಎಂದರೂ ಅಲ್ಲಿಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಹಾದಿ ಬೀದಿಯಲ್ಲಿ, ಶಾಲೆ ಎದುರು ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಕಸ ಹಾಕಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಕೊಪ್ಪಳ ನಗರಸಭೆ ಮುಂದಾಗಿದೆ.ತಪ್ಪಿತಸ್ಥರ ವಿರುದ್ಧ ಎಫ್ಐಆರ್ ಮಾಡಲು ತೀರ್ಮಾನಿಸಿದೆ. ಈ ದಿಸೆಯಲ್ಲಿ ಖುದ್ದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶಾ ಪಲ್ಟನ್ ಕ್ರಮ ಕೈಗೊಳ್ಳುತ್ತಿದ್ದಾರೆ. ಅವರು ಕಳೆದ ಒಂದೂವರೆ ತಿಂಗಳಿಂದ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ನಿತ್ಯವೂ ಬೆಳಗ್ಗೆಯೇ ವಾರ್ಡ್‌ಗಳಲ್ಲಿ ಸುತ್ತಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಒಂದು ದಿನವೂ ರಜೆ ಇಲ್ಲದಂತೆ ಬೆಳ್ಳಂಬೆಳಗ್ಗೆಯೇ ವಾರ್ಡ್‌ಗಳಲ್ಲಿ ಸಂಚರಿಸುತ್ತಾರೆ. ಈ ಸಂದರ್ಭದಲ್ಲಿ ಯಾರಾದರೂ ಕಸ ಎಸೆಯುತ್ತಿದ್ದರೆ, ಅವರಿಗೆ ಕೈಮುಗಿದು ''''ದಯಮಾಡಿ ಕಸವನ್ನು ಹಾದಿಬೀದಿಯಲ್ಲಿ ಹಾಕಿ ಗಲೀಜು ಮಾಡಬೇಡಿ. ಮನೆ ಬಾಗಿಲಿಗೆ ಬರುವ ಕಸದ ವಾಹನಗಳಲ್ಲಿಯೇ ಹಾಕಿ'''' ಎಂದು ಮನವಿ ಮಾಡುತ್ತಿದ್ದಾರೆ.ಕಳೆದ ಒಂದೂವರೆ ತಿಂಗಳಿಂದ ಹಾದಿಬೀದಿಯಲ್ಲಿ ಕಸ ಹಾಕದಂತೆ ಮನವಿ ಮಾಡುತ್ತಿದ್ದ ಅಕ್ಬರ್ ಪಾಶಾ ಈಗ ಎಫ್ಐಆರ್ ಅಸ್ತ್ರ ಹಿಡಿದುಕೊಂಡಿದ್ದಾರೆ.ನಗರದ ಪ್ರಮುಖ ಸ್ಥಳಗಳಲ್ಲಿ ಕಸ ಹಾಕಿದರೆ ಎಚ್ಚರಿಕೆ ಎನ್ನುವ ಬೋರ್ಡ್ ಸಹ ನೇತು ಹಾಕಲಾಗಿದೆ. ಹಾಗೊಂದು ವೇಳೆ ಬೋರ್ಡ್ ನೋಡಿಯೂ ಕಸ ಹಾಕಿದರೆ ಎಫ್ಐಆರ್ ದಾಖಲಿಸಲು ತೀರ್ಮಾನ ಮಾಡಲಾಗಿದೆ. ನಗರದಲ್ಲಿ ಸಂಚರಿಸುವಾಗ, ರಸ್ತೆಯಲ್ಲಿ, ದಾರಿಯಲ್ಲಿ ಕಸ ಎಸೆದಿದ್ದು ಕಂಡರೆ ಎಫ್‌ಐಆರ್ ಮಾಡುತ್ತೇನೆ ಎನ್ನುತ್ತಾರೆ. ಈ ಕುರಿತು ನಗರ ಠಾಣೆಯ ಪಿಐ ಸಂತೋಷ ಹಳ್ಳೂರು ಅವರಿಗೆ ಸೂಚನೆ ನೀಡಿದ್ದು, ಕಸ ಹಾಕುವುದನ್ನು ಕಂಡ ತಕ್ಷಣ ಕರೆ ಮಾಡುತ್ತೇನೆ, ಬನ್ನಿ ಎಫ್ಐಆರ್ ದಾಖಲಿಸಿ ಎಂದು ಸೂಚಿಸಿದ್ದಾರೆ.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಒಂದೂವರೆ ತಿಂಗಳು ಆಗಿದ್ದು, ನಿತ್ಯವೂ ಒಂದಿಲ್ಲೊಂದು ವಾರ್ಡ್ ನಲ್ಲಿ ಇರುತ್ತಾರೆ. ಯಾರಾದರೂ ಕರೆ ಮಾಡಿದರೆ ಸಾಕು ಅಲ್ಲಿಗೆ ಭೇಟಿ ನೀಡಿ, ಅವರ ಸಮಸ್ಯೆಗೆ ಸ್ಪಂದಿಸಿ, ಪರಿಹರಿಸುತ್ತಿದ್ದಾರೆ.ಮೀನು ಮಾರುಕಟ್ಟೆ, ಸಾಲರಜಂಗ್ ರಸ್ತೆ, ಮಟನ್ ಮಾರ್ಕೆಟ್ ಸೇರಿದಂತೆ ಮೊದಲಾದ ಕಡೆ ವಿಪರೀತ ಗಲೀಜು ಇತ್ತು. ಇದೆಲ್ಲ ಸ್ವಚ್ಛ ಮಾಡಿ, ಅಲ್ಲಿ ಗಲೀಜು ಮಾಡದಂತೆ ಕಟ್ಟೆಚ್ಚರ ನೀಡಿದ್ದಾರೆ. ವಾರ್ಡ್‌ಗಳಲ್ಲಿ ನೀರು ಬಂದಿಲ್ಲ ಎಂದರೂ ಅಲ್ಲಿಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.ಹಾದಿ-ಬೀದಿಯಲ್ಲಿ ಕಸ ಹಾಕುವುದು ಅಪರಾಧ. ಈ ಕುರಿತು ಈಗಾಗಲೇ ನೋಟಿಸ್ ಬೋರ್ಡ್ ಹಾಕಲಾಗಿದೆ. ಅದನ್ನು ಮೀರಿ ಕಸ ಹಾಕಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ಕೊಪ್ಪಳ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಶಾ ಪಲ್ಟನ್ ಹೇಳಿದರು.