ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾ ಸಂಚಾಲಕರಾಗಿ ಮೀರಾ ಆಯ್ಕೆ

| Published : Jul 15 2024, 01:45 AM IST

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾ ಸಂಚಾಲಕರಾಗಿ ಮೀರಾ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಾ.೪, ೨೦೨೪ರಂದು ನಿಧನಹೊಂದಿರುವುದರಿಂದ ಅಧ್ಯಕ್ಷ ಸಾನ ಖಾಲಿ ಉಳಿದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿರುವುದರಿಂದ ಸಮ್ಮೇಳನದ ಚಟುವಟಿಕೆಗಳು ತಕ್ಷಣದಿಂದಲೇ ಆರಂಭಗೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ಪರಿಷತ್ತಿನ ಅನುಮೋದಿತ ತಿದ್ದುಪಡಿ ನಿಬಂಧನೆ ೩೩-೨(೬)ರಂತೆ ಮೀರಾ ಶಿವಲಿಂಗಯ್ಯ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಚಾಲಕರನ್ನಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದರು.

ಭಾನುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಾ.೪, ೨೦೨೪ರಂದು ನಿಧನಹೊಂದಿರುವುದರಿಂದ ಅಧ್ಯಕ್ಷ ಸಾನ ಖಾಲಿ ಉಳಿದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿರುವುದರಿಂದ ಸಮ್ಮೇಳನದ ಚಟುವಟಿಕೆಗಳು ತಕ್ಷಣದಿಂದಲೇ ಆರಂಭಗೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ಪರಿಷತ್ತಿನ ಅನುಮೋದಿತ ತಿದ್ದುಪಡಿ ನಿಬಂಧನೆ ೩೩-೨(೬)ರಂತೆ ಮೀರಾ ಶಿವಲಿಂಗಯ್ಯ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ನಿಬಂಧನೆ ಪ್ರಕಾರ ಸಮ್ಮೇಳನ ಜರುಗಲಿರುವ ಜಿಲ್ಲೆಯ ಚುನಾಯಿತ ಅಧ್ಯಕ್ಷರ ಸ್ಥಾನ ಯಾವುದೇ ಕಾರಣದಿಂದ ತೆರವಾಗಿದ್ದಲ್ಲಿ ಅಥವಾ ಜಿಲ್ಲಾಧ್ಯಕ್ಷರು ಆರೋಗ್ಯ ಸಮಸ್ಯೆಯ ಕಾರಣದಿಂದ ಅಥವಾ ಮತ್ತಾವುದೇ ಕಾರಣದಿಂದ ಸಮ್ಮೇಳನದ ಪೂರ್ವಸಿದ್ಧತೆಗಳನ್ನು ಒಳಗೊಂಡಂತೆ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಮರ್ಥವಾಗಿಲ್ಲದ ಪಕ್ಷದಲ್ಲಿ, ಅವರು ನಿಯಮಾನುಸಾರ ನಿರ್ವಹಿಸಬೇಕಾದ ಎಲ್ಲ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಪರಿಷತ್ತಿನ ಅಧ್ಯಕ್ಷರು ಸಮಿತಿಯೊಂದನ್ನು ರಚಿಸುವುದು. ಆ ಸಮಿತಿಯ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸತಕ್ಕದ್ದು ಎಂದು ತಿಳಿಸಿರುವುದಾಗಿ ಹೇಳಿದರು.

ಅದರಂತೆ ಈ ಹಿಂದೆ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತಂತೆ ನಡೆದ ಸಮನ್ವಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಜಿಲ್ಲಾ ಸಂಚಾಲಕರನ್ನಾಗಿ ಮೀರಾ ಶಿವಲಿಂಗಯ್ಯ ಅವರನ್ನು ನೇಮಿಸಲಾಗಿದೆ ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೇರವಾಗಿ ಬಂದರೆ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆಯಾಗಲಿದೆ ಎಂಬ ಆರೋಪಗಳಿವೆ. ಆದರೆ, ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿನ ನಡುವೆ ಸೌಹಾರ್ದತೆ, ಸಮನ್ವಯತೆ ಇದೆ. ಯಾರೂ ಸಹ ಯಾರ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲರ ಸಹಕಾರ, ಸಹಯೋಗ, ಸಹಭಾಗಿತ್ವವಿರುವುದರಿಂದ ಸರ್ಕಾರದ ಜೊತೆ ಸಮಾಲೋಚನೆಯನ್ನೂ ಮಾಡುತ್ತೇವೆ. ಸಹಮತವನ್ನೂ ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸದಿಂದ ನುಡಿದರು.