‘ಅಕ್ಕ’ ಇನ್ನು ನೆನಪು: ಬಡವಾದ ಬಸವ ಅನುಯಾಯಿಗಳು

| Published : May 25 2024, 01:37 AM IST

ಸಾರಾಂಶ

ಬೀದರ್‌ನ ಪಾಪನಾಶ ದೇವಸ್ಥಾನ ಬಳಿಯ ಬಸವಗಿರಿಯಲ್ಲಿ ನಡೆದ ಅಂತ್ಯಕ್ರಿಯೆ. ಅನ್ನಪೂರ್ಣ ತಾಯಿ ಅಂತಿಮ ದರ್ಶನಕ್ಕೆ ಭಕ್ತರ ದಂಡು. ಈಶ್ವರ ಖಂಡ್ರೆ, ಪಟ್ಟದ್ದೇವರು, ಗಂಗಾಮಾತೆ, ನಿಜಗುಣಾನಂದ ಶ್ರೀ ಭಾಗಿಯಾಗಿದ್ದರು. ತಲೆ ಮೇಲೆ ವಚನ ಸಾಹಿತ್ಯ ಗ್ರಂಥ ಹೊತ್ತು ನಡೆದ ಮಹಿಳೆಯರು.

ಕನ್ನಡಪ್ರಭ ವಾರ್ತೆ ಬೀದರ್‌

ಇಡೀ ಜೀವನವನ್ನು ಬಸವ ತತ್ವ ಪ್ರಚಾರ, ಪ್ರಸಾರಕ್ಕಾಗಿ ಸವೆಸಿದ್ದ ಇಲ್ಲಿನ ಬಸವ ಸೇವಾ ಪ್ರತಿಷ್ಠಾನದ ಡಾ. ಅಕ್ಕ ಅನ್ನಪೂರ್ಣ ತಾಯಿ ಅವರ ಅಕಾಲಿಕ ನಿಧನ, ಬಸವ ಭಕ್ತರಲ್ಲಿ ಕಣ್ಣೀರಿನ ಕೋಡೆಯನ್ನೇ ಹರಿಸಿತ್ತು, ಅಂತಿಮ ದರ್ಶನಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು.

ಗುರುವಾರ ಲಿಂಗೈಕ್ಯರಾದ ಅಕ್ಕ ಅನ್ನಪೂರ್ಣನವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಅವರ ಅನುಯಾಯಿಗಳು ವಚನ ಸಾಹಿತ್ಯವನ್ನು ತಮ್ಮ ತಲೆಯ ಮೇಲೆ ಹೊತ್ತು ಪಾಲ್ಗೊಂಡಿದ್ದರು.

ಗುರುವಾರ ಸಂಜೆ 4ಕ್ಕೆ ಅಕ್ಕನವರ ಪಾರ್ಥೀವ ಶರೀರವನ್ನು ಇಲ್ಲಿನ ಹಾರೂರಗೇರೆಯ ಬಸವೇಶ್ವರ ದೇವಸ್ಥಾನಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ನಂತರ ಸಂಜೆ 5.30ಕ್ಕೆ ಅಲ್ಲಿಂದ ಶರಣ ಉದ್ಯಾನಕ್ಕೆ ತರಲಾಯಿತು. ತದನಂತರ ರಾತ್ರಿ 9ರ ಸುಮಾರಿಗೆ ಬಸವಗಿರಿಯ ಕಟ್ಟಡಕ್ಕೆ ಕರೆತಂದು ಸಾರ್ವಜನಿಕ ಭಕ್ತರ, ಅನುಯಾಯಿಗಳ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು. ರಾತ್ರಿಯಿಡೀ ಬಸವ ಪ್ರಾರ್ಥನೆ, ವಚನ ಪಠಣವನ್ನು ಮಾಡಲಾಗಿ, ಶುಕ್ರವಾರ ಸಂಜೆ 4ರ ಸುಮಾರಿಗೆ ಬಸವಗಿರಿಯ ಪರಿಸರದಲ್ಲಿ ಅಂತಿಮ ಕ್ರಿಯೆಗಳನ್ನು ಲಿಂಗಾಯತ ವಿಧಿವಿಧಾನಗಳಂತೆ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ, ನಿಜಗುಣಾನಂದ ಶರಣರು, ಬೆಲ್ದಾರ್‌ ಶರಣರು, ಅಕ್ಕ ಗಂಗಾಂಬಿಕೆ ಹಾಗೂ ಸದ್ಗುರು ಬಸವಪ್ರಭುಗಳು ಅವರ ಸಮ್ಮುಖದಲ್ಲಿ ನಡೆಸಲಾಯಿತು.

ನಗರದ ಪಾಪನಾಶ ದೇವಸ್ಥಾನದ ಬಳಿಯ ಬಸವ ಗಿರಿಯ ವರೆಗೆ ನಡೆದ ಅಂತಿಮಯಾತ್ರೆಯಲ್ಲಿ ಸಾವಿವಾರು ಸಂಖ್ಯೆಯಲ್ಲಿ ಅವರ ಭಕ್ತರು, ಅನುಯಾಯಿಗಳು ಪಾಲ್ಗೊಂಡು ಅಕ್ಕನವರನ್ನು ನೆನೆದು ಕಣ್ಣೀರು ಹಾಕಿದರಲ್ಲದೇ ಅವರ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಬಸವಗಿರಿಯಲ್ಲಿ ನಡೆದ ಅಂತಿಮ ಕ್ರಿಯಾಕ್ರಮಕ್ಕೂ ಮುನ್ನ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ಅನೇಕ ಪೂಜ್ಯರು, ಗಣ್ಯರು ಅಕ್ಕನವರ ಕಾರ್ಯಗಳ ಕುರಿತು ಮಾತನಾಡಿದರು.

ಅಕ್ಕ ಗಂಗಾಂಬಿಕೆ ಅವರು ವಚನ ಪಠಣ ಮಾಡಿದರು. ಬೈಲೂರು ನಿಷ್ನಿಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು, ಕೂಡಲಸಂಗಮದ ಜಗದ್ಗುರು ಡಾ. ಗಂಗಾಮಾತಾ, ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಡಾ. ಗಂಗಾಬಿಕೆ ಅಕ್ಕ, ಕೌಠಾದ ಸಿದ್ದರಾಮ ಶರಣ ಬೆಲ್ದಾಳ, ಡಾ. ಬಸವಲಿಂಗ ಅವಧೂತರು, ಗುರುಮಿಠಕಲ್‌ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಕೇಂದ್ರ ಸಚಿವರಾದ ಭಗವಂತ ಖೂಬಾ, ಮಾಜಿ ಸಚಿವರಾದ ರಾಜಶೇಖರ ಪಾಟೀಲ್‌ ಹುಮನಾಬಾದ್‌, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಕುಂತಲಾ ಬೆಲ್ದಾಳೆ, ಸಾವಿತ್ರಿ ಸಲಗರ, ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್‌ ಖದೀರ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಗುರುನಾಥ ಕೊಳ್ಳೂರ, ಸೂರ್ಯಕಾಂತ ನಾಗಮಾರಪಳ್ಳಿ, ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ ರಮೇಶ ಮಠಪತಿ, ಬಾಬು ವಾಲಿ, ಜಯರಾಜ ಖಂಡ್ರೆ, ಶಿವಶಂಕರ ಟೋಕರೆ, ಚಂದ್ರಶೇಖರ ಹೆಬ್ಬಾಳೆ, ಅಲ್ಲಂಪ್ರಭು ನಾವದಗೇರೆ, ಶಿವಕುಮಾರ ಸಾಲಿ, ಡಾ. ಎಸ್‌ಆರ್‌ ಮಠಪತಿ ವೀರಶೆಟ್ಟಿ ಪಟ್ನೆ, ವಿರುಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ, ನವಲಿಂಗ ಪಾಟೀಲ್‌, ವೈಜನಾಥ ಸಜ್ಜನಶೆಟ್ಟಿ, ರಮೇಶ ಮಠಪತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.