ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕ ಪಡೆ ರಚಿಸಿದೆ. ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶ.
ಧಾರವಾಡ:
ಹು-ಧಾ ಮಹಾನಗರ ಪೊಲೀಸ್ ಇಲಾಖೆಗೆ ಮಹಿಳಾ ಆರಕ್ಷಕರಿರುವ ಪ್ರತ್ಯೇಕ ವಾಹನ ಹೊಂದಿರುವ ಅಕ್ಕ ಪಡೆಯನ್ನು ಸೋಮವಾರ ಸೃಜನಾ ರಂಗಮಂದಿರ ಬಳಿ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಹಸಿರು ಬಾವುಟ ತೊರುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಸಚಿವ ಸಂತೋಷ ಲಾಡ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕ ಪಡೆ ರಚಿಸಿದೆ. ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶ. ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು ಅಕ್ಕ ಪಡೆಯ ಮತ್ತೊಂದು ಉದ್ದೇಶ ಎಂದರು.
ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದಾಗಿದೆ. ಶಿಕ್ಷಣದ ಮೂಲಕ ಹಕ್ಕು, ಕಾನೂನು, ಸುರಕ್ಷತಾ ಕ್ರಮ ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವದು ಮತ್ತು ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆದು, ಕಾನೂನಿನ ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದು ಅಕ್ಕ ಪಡೆಯ ಗುರಿಯಾಗಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳಗ್ಗೆ 7ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸುತ್ತದೆ. ಈ ತಂಡವು ಶಾಲೆ, ಕಾಲೇಜು, ಬಾಲಕಿಯರ, ಮಹಿಳಾ ಹಾಸ್ಟೆಲ್, ಬಸ್, ರೈಲ್ವೆ ನಿಲ್ದಾಣ, ಸ್ಥಳೀಯ ಮಾರುಕಟ್ಟೆ, ಪ್ರೇಕ್ಷಣಿಯ ಸ್ಥಳ, ಪವಿತ್ರ ಸ್ಥಳ ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿರುತ್ತದೆ ಎಂದರು.