ದೇವತಾ ಕಾರ್ಯಗಳಿಂದ ಉತ್ತಮ ಮಳೆ, ಬೆಳೆ, ಶಾಂತಿ ಸಿಗುತ್ತದೆ. ಉತ್ತಮ ರೀತಿಯಿಂದ ವಿವಿಧ ತಳಿಗಳ ರಾಸುಗಳನ್ನು ತಮ್ಮ ಕುಟುಂಬದಲ್ಲಿ ಪೋಷಿಸಿ ಸಲಹಿ ಅದನ್ನು ಅನುಸರಿಸಿಕೊಂಡು ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡರ ಕುಟುಂಬ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಟೇಕಲ್

ಶ್ರೀ ಸಕಲಾಂಭದೇವಿ ಹಾಗೂ ಶ್ರೀ ಪ್ರಸನ್ನ ಭೀಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ತಮ್ಮ ರಾಸುಗಳ ಪ್ರದರ್ಶನ ಮಾಡುವ ಮೂಲಕ ಗ್ರಾಮೀಣ ಭಾಗದ ರೈತರು ಹಳ್ಳಿ ಸೊಗಡಿನ ಪರಂಪರೆ ಉಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಲೂರು ತಾಲೂಕಿನ ತೊರ್ನನಹಳ್ಳಿ ಇತಿಹಾಸ ಪ್ರಸಿದ್ಧ ಮಹೋತ್ಸವದಲ್ಲಿ ನಾಲ್ಕನೇ ದಿನವಾದ ಭಾನುವಾರ ಕ್ಷೇತ್ರದಲ್ಲಿ ರೈತ ವೆಂಕಟೇಶ್ ಗೌಡರ ರಾಸುಗಳ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇವತಾ ಕಾರ್ಯಗಳಿಂದ ಉತ್ತಮ ಮಳೆ, ಬೆಳೆ, ಶಾಂತಿ ಸಿಗುತ್ತದೆ. ಉತ್ತಮ ರೀತಿಯಿಂದ ವಿವಿಧ ತಳಿಗಳ ರಾಸುಗಳನ್ನು ತಮ್ಮ ಕುಟುಂಬದಲ್ಲಿ ಪೋಷಿಸಿ ಸಲಹಿ ಅದನ್ನು ಅನುಸರಿಸಿಕೊಂಡು ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡರ ಕುಟುಂಬ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ವೆಂಕಟೇಶ್‌ಗೌಡ ಮಾತನಾಡಿ, ನಾವು ನಮ್ಮ ಕುಟುಂಬದಲ್ಲಿ 30 ರೀತಿಯ ವಿವಿಧ ರೀತಿಯ ದೇಶಿಯ ತಳಿಗಳ ರಾಸುಗಳನ್ನು ಸಾಕಾಣೆ ಮಾಡುತ್ತಿದ್ದು, ಅದರ ಪೋಷಣೆಯು ಕೂಡ ಮಾಡಲಾಗುತ್ತಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ಈ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶವಾಗಿದೆ ಎಂದರು.

ಇದೇ ವೇಳೆ ಸುಮಾರು ಆರಕ್ಕೂ ಹೆಚ್ಚು ಜೊತೆ ಹಳ್ಳಿಕಾರ್ ರಾಸುಗಳನ್ನು ಸಿಂಗರಿಸಿ ಜಾತ್ರೆಯ ಪ್ರತಿಬಿದಿಯಲ್ಲೂ ಅದನ್ನು ಮದ್ದಳೆ ಹಾಗೂ ಡೊಳ್ಳು ಕುಣಿತ ಮಂಗಳವಾದ್ಯಗಳ ಮೂಲಕ ಭವ್ಯವಾಗಿ ಸ್ವಾಗತಿಸಿ ಪ್ರದರ್ಶಿಸಲಾಯಿತು, ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.

ಮಾಜಿ ಜಿಪಂ ಸದಸ್ಯೆ ಗೀತಮ್ಮ ವೆಂಕಟೇಶ್ ಗೌಡ, ಸಹೋದರ ವೆಂಕಟಸ್ವಾಮಿ, ಸುಬ್ಬಣ್ಣ, ಯೋಜನೆ ಪ್ರಾಧಿಕಾರದ ಅಧ್ಯಕ್ಷ ವಿಜಯ ನರಸಿಂಹ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಪುರ ಕಿಟ್ಟಿ, ಎಸ್.ಜಿ.ರಾಮಮೂರ್ತಿ, ಬಾಳಿಗಾನಹಳ್ಳಿ ಶ್ರೀನಿವಾಸ್, ಅಂಜಿ, ಪ್ರಗತಿ ಶ್ರೀನಿವಾಸ್ ಇದ್ದರು.