ಸಾರಾಂಶ
ಅಂದು ಅಕ್ಕ ಮಹಿಳೆಯರನ್ನು ವಚನಕಾರ್ತಿಯರನ್ನಾಗಿ ಮಾಡಿದ ಕಾರಣ ಇಂದು ಮಹಿಳೆಯರು ಸಾಹಿತ್ಯ ಲೋಕದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದಾರೆ ಎಂದು ಅಕ್ಕ ಪ್ರಶಸ್ತಿ, ಸಾಹಿತಿ ಡಾ. ಲೀಲಾದೇವಿ ಆರ್ ಪ್ರಸಾದ, ಅಕ್ಕನ ಬಳಗ, ಸ್ತ್ರೀ ಸ್ವತಂತ್ರಳಾಗಬೇಕು
ಕನ್ನಡಪ್ರಭ ವಾರ್ತೆ ಧಾರವಾಡ
ಅಕ್ಕಮಹಾದೇವಿ ಸಾಹಿತ್ಯ ಲೋಕದ ದಿಗ್ಗಜರು. ಅವರು ಜಗತ್ತಿನ ಮೊದಲ ಕವಯತ್ರಿ ಅಷ್ಟೇ ಅಲ್ಲ. ಅವರೊಬ್ಬ ಶಿವಶರಣೆಯಾಗಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವೆ, ಸಾಹಿತಿ ಡಾ. ಲೀಲಾದೇವಿ ಆರ್ ಪ್ರಸಾದ ಹೇಳಿದರು.ಅಕ್ಕನ ಬಳಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದ ಮಹಿಳೆಗೆ ಸ್ವಾತಂತ್ರ್ಯ ಇರಲಿಲ್ಲ. ಅಂದು ಪುರುಷ ಪ್ರಧಾನ ನಾಡಿನಲ್ಲಿ ಸ್ತ್ರೀಯರ ಬದುಕು ಕಷ್ಟಕರವಾಗಿತ್ತು. ಇದನ್ನರಿತ ಅಕ್ಕಮಹಾದೇವಿ ಸ್ತ್ರೀ ಸ್ವತಂತ್ರಳಾಗಬೇಕು ಎಂದು ಕೌಶಿಕ ಮಹಾರಾಜನ ಕೈಸೆರೆಯಿಂದ ಹೊರ ಬಂದು ಚನ್ನಮಲ್ಲಿಕಾರ್ಜುನ ದೇವರನ್ನು ಹುಡುಕುತ್ತ ಹೊರಟಳು. ಮಾರ್ಗದುದ್ದಕ್ಕೂ ಕಷ್ಟ, ನೋವು ಅನುಭವಿಸಿ ಪ್ರತಿ ಗ್ರಾಮದಲ್ಲೂ ಅನುಭಾವ ಚಿಂತನೆ ಮಾಡುತ್ತ ಹೊರಟಳು ಎಂದರು.ಬಸವಣ್ಣನವರ ಅನುಭವ ಮಂಟಪಕ್ಕೆ ಆಗಮಿಸಿ ಅಲ್ಲಿಯೇ ವಚನಗಳನ್ನು ರಚಿಸುತ್ತ ಕಾಲ ಕಳೆದರು. ಅದೇ ಸಮಯದಲ್ಲಿ ನೂರಾರು ಸ್ತ್ರೀಯರನ್ನು ಅಕ್ಷರಸ್ಥರನ್ನಾಗಿ ಮಾಡಿ ವಚನಗಳನ್ನು ರಚಿಸಲು ಪ್ರೇರೇಪಿಸಿದರು. ಅಂದು ಅಕ್ಕ ಮಹಿಳೆಯರನ್ನು ವಚನಕಾರ್ತಿಯರನ್ನಾಗಿ ಮಾಡಿದ ಕಾರಣ ಇಂದು ಮಹಿಳೆಯರು ಸಾಹಿತ್ಯ ಲೋಕದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದಾರೆ. ನಾನು ರಾಜಕಾರಣದಲ್ಲಿದ್ದರೂ ಸತ್ಯಶುದ್ಧ ಕಾಯಕ ಮಾಡಿ ಅಕ್ಕಮಹಾದೇವಿ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದೇನೆ. ಟೆಲಿಫಿಲ್ಮ, ಪ್ರಬಂಧ, ಸಂಕಲನ, ಕಿರುನಾಟಕ ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. 93ನೇ ವಯಸ್ಸಿನಲ್ಲೂ ಕೂಡ ರಾಜ್ಯವ್ಯಾಪಿ ಸುತ್ತಿ ಅಕ್ಕನ ವಚನ ಪ್ರಸಾರ ಮಾಡುತ್ತಿರುವ ನನಗೆ ಅಕ್ಕ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ಮುಕ್ತಾ ಸವಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಾಜೇಶ್ವರಿ ಮಹೇಶ್ವರಯ್ಯ, ಲೀಲಾವತಿ ಬೆಲ್ಲದ, ಪ್ರೇಮಾ ಹಲಕಿ, ಗೌರಾ ಹಾಲಭಾವಿ, ಸುನಂದಾ ಗುಡ್ಡದ, ವೀಣಾ ಹರಿಹರ, ಶಾರದಾ ಕೌದಿ ಇದ್ದರು.