ಅಕ್ಕಮಹಾದೇವಿ ಸ್ತ್ರೀಗೆ ಸಮಾನತೆ ತಂದಿದ್ದರು: ಮಂಜುಳಾ ಮಾನಸ

| Published : May 09 2024, 12:45 AM IST

ಸಾರಾಂಶ

12ನೇ ಶತಮಾನದ ವಚನ ಯುಗವು ಕ್ರಾಂತಿಯುಗ ಎಂದು ಪ್ರಖ್ಯಾತಿ ಹೊಂದಿದೆ. ಇಂದು ಸ್ತ್ರೀ ಸಮಾನತೆಯ ಚರ್ಚೆಯಾಗುತ್ತಿರುವ ದಿನಗಳಿಗೆ ಹೋಲಿಕೆ ಮಾಡಿದರೆ ಅಂದೇ ಅಕ್ಕಮಹಾದೇವಿ ಅವರು ಆ ಕೆಲಸವನ್ನು ನಿರ್ವಹಿಸಿದ್ದರು. ಆಗಿನ ಕಾಲದಲ್ಲೇ ಪುರುಷ ಪ್ರಾಧನ್ಯತೆಯನ್ನು ಧಿಕ್ಕರಿಸಿ ನಿಂತವರು ಅಕ್ಕಮಹಾದೇವಿ.

ಕನ್ನಡಪ್ರಭ ವಾರ್ತೆ ಮೈಸೂರು

ಇಂದು ಸ್ತ್ರೀ ಸಮಾನತೆಯ ಚರ್ಚೆಯಾಗುತ್ತಿರುವ ದಿನಗಳಿಗೆ ಹೋಲಿಕೆ ಮಾಡಿದರೆ ಅಂದೇ ಅಕ್ಕಮಹಾದೇವಿ ಅವರು ಆ ಕೆಲಸವನ್ನು ನಿರ್ವಹಿಸಿದ್ದರು ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.

ನಗರದ ಶ್ರೀನಟರಾಜ ಪ್ರತಿಷ್ಠಾನದಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದ ವಚನ ಯುಗವು ಕ್ರಾಂತಿಯುಗ ಎಂದು ಪ್ರಖ್ಯಾತಿ ಹೊಂದಿದೆ. ಇಂದು ಸ್ತ್ರೀ ಸಮಾನತೆಯ ಚರ್ಚೆಯಾಗುತ್ತಿರುವ ದಿನಗಳಿಗೆ ಹೋಲಿಕೆ ಮಾಡಿದರೆ ಅಂದೇ ಅಕ್ಕಮಹಾದೇವಿ ಅವರು ಆ ಕೆಲಸವನ್ನು ನಿರ್ವಹಿಸಿದ್ದರು. ಆಗಿನ ಕಾಲದಲ್ಲೇ ಪುರುಷ ಪ್ರಾಧನ್ಯತೆಯನ್ನು ಧಿಕ್ಕರಿಸಿ ನಿಂತವರು ಅಕ್ಕಮಹಾದೇವಿ ಎಂದು ಅವರು ತಿಳಿಸಿದರು

ಜೆಎಸ್ಎಸ್ ಮಹಿಳಾ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೆ. ಪುಷ್ಪಲತಾ ಮಾತನಾಡಿ, ಹೆಣ್ಣಿನ ಮನಸ್ಸಿನ ಅನಾವರಣವನ್ನು ಅಕ್ಕಮಹಾದೇವಿಯ ವಚನಗಳಲ್ಲಿ ಕಾಣಬಹುದು. ಮಹಾದೇವಿ ಅಕ್ಕನ ಜೀವನ ಚರಿತ್ರೆಯು ಇಡೀ ಮಹಿಳಾ ವರ್ಗಕ್ಕೆ ಮಾದರಿಯಾದುದು. ಇದು ಹೆಣ್ಣಿನ ಪ್ರತಿ ಸಾಧನೆಯ ಕಠಿಣ ಹೆಜ್ಜೆಯನ್ನು ತಿಳಿಸುತ್ತದೆ. ಅಕ್ಕಮಹಾದೇವಿಯು ಆಧ್ಯಾತ್ಮಿಕ ಚಿಂತೆಯೂ ಹೌದು. ರಾಜತ್ವ ಮತ್ತು ಪ್ರಭುತ್ವಗಳ ಸಂಘರ್ಷವು ಅಕ್ಕಮಹಾದೇವಿಯವರ ಜೀವನದಲ್ಲಿ ಘಟಿಸುತ್ತದೆ ಎಂದು ಹೇಳಿದರು.

ಹೆಣ್ತನ ಎಂಬುದು ಬರಿ ದೇಹಕ್ಕೆ ಸಂಬಂಧಿಸಿಲ್ಲ, ಮನಸ್ಸಿಗೂ ಕೂಡ ಸಂಬಂಧಿಸಿದ್ದು. ಆಕೆಯ ವ್ಯಕ್ತಿತ್ವ ಆಕೆಯ ತಲೆ ಕೂದಲಷ್ಟೇ ಬೃಹತಾದುದು. ಕೇವಲ ದೇಹಕ್ಕೆ ಮಾತ್ರ ಆದ್ಯತೆ ಕೊಡುವ ಪುರುಷ ವರ್ಗವನ್ನು ನಾನು ಧಿಕ್ಕರಿಸುತ್ತೇನೆ. ದೇಹದಾಚೆಗೂ ಹೆಣ್ಣಿನಲ್ಲಿ ಮಿಗಿಲಾದ ವ್ಯಕ್ತಿತ್ವವಿದೆ ಎಂಬುದನ್ನು ಅಕ್ಕಮಹಾದೇವಿಯು 12ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ್ದಳು. ಅಂತರಂಗ ಹಾಗೂ ಬಹಿರಂಗದ ಹೋರಾಟಗಾರ್ತಿ ಅಕ್ಕಮಹಾದೇವಿ ಎಂದು ಅವರು ತಿಳಿಸಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಇದ್ದರು. ಚೂಡಾಮಣಿ ಪ್ರಾರ್ಥಿಸಿದರು. ಶ್ರೀ ನಟರಾಜ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಸೌಮ್ಯಾ ಬಿ. ನಾಯಕ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಎನ್.ಆರ್. ಸಿಂಧು ವಂದಿಸಿದರು.