ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ ಸ್ಫೂರ್ತಿದಾಯಕ ಮಹಿಳೆ: ಶಿಕ್ಷಕ ನಾಗಮಲ್ಲೇಶ

| Published : Nov 28 2024, 12:34 AM IST

ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ ಸ್ಫೂರ್ತಿದಾಯಕ ಮಹಿಳೆ: ಶಿಕ್ಷಕ ನಾಗಮಲ್ಲೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯದಲ್ಲಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ಅಕ್ಕಮಹಾದೇವಿ ಸ್ಫೂರ್ತಿದಾಯಕ ಮಹಿಳೆಯಾಗಿ ಕಾಣುತ್ತಾರೆ ಎಂದು ಮೆಲ್ಲಳ್ಳಿಮೋಳೆ ಸರ್ಕಾರಿ ಶಾಲೆಯ ಶಿಕ್ಷಕ ನಾಗಮಲ್ಲೇಶ ಹೇಳಿದರು. ಕೊಳ್ಳೇಗಾಲದಲ್ಲಿ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ಮಾಸಾಚರಣೆ ೨೦೨೪ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕನ್ನಡ ಸಾಹಿತ್ಯದಲ್ಲಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ಅಕ್ಕಮಹಾದೇವಿ ಸ್ಫೂರ್ತಿದಾಯಕ ಮಹಿಳೆಯಾಗಿ ಕಾಣುತ್ತಾರೆ ಎಂದು ಮೆಲ್ಲಳ್ಳಿಮೋಳೆ ಸರ್ಕಾರಿ ಶಾಲೆಯ ಶಿಕ್ಷಕ ನಾಗಮಲ್ಲೇಶ ಹೇಳಿದರು.

ತಾಲೂಕಿನ ಟಗರಪುರದ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ, ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕನ್ನಡದ ಮೊದಲ ಮಹಿಳಾ ಕವಯಿತ್ರಿ ಎನಿಸಿರುವ ಅಕ್ಕಮಹಾದೇವಿ ಕನ್ನಡದ ಪ್ರಮುಖ ಕವಯಿತ್ರಿಗಳಲ್ಲಿ ಒಬ್ಬರು. ಅಕ್ಕಮಹಾದೇವಿಯವರ ಕೊಡುಗೆಗಳು ವಚನಗಳ ರೂಪದಲ್ಲಿವೆ. ವಚನ ಯುಗದಲ್ಲಿ, ಶ್ರಮಿಕ ವರ್ಗ, ಅದರಲ್ಲೂ ಮಹಿಳಾ ವರ್ಗವು ತಮ್ಮ ಮೇಲಿನ ದಬ್ಬಾಳಿಕೆಯ ವಿರುದ್ಧ ತಮ್ಮ ಬಂಡಾಯವನ್ನು ಸಾಹಿತ್ಯ ಅಭಿವ್ಯಕ್ತಿಗಳ ಮೂಲಕ ದಾಖಲಿಸಿರುವುದನ್ನು ನಾವು ಕಾಣಬಹುದು. ಪುರುಷ ಸಮಾಜ ಹೇರುವ ಲೌಕಿಕ ಹೊರೆ, ಮಿತಿಗಳಿಂದ ಕುಗ್ಗಿ ಹೋಗಿರುವ ಸ್ತ್ರೀ ಸಮುದಾಯಕ್ಕೆ ಹೊಸ ಚೈತನ್ಯವನ್ನು ತಂದು ಅವರ ಆಧ್ಯಾತ್ಮಿಕ ಸಾಧನೆಗೆ ಪ್ರೇರಣೆ ನೀಡುವಲ್ಲಿ ಅಕ್ಕನ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.

ಕಲ್ಯಾಣದಲ್ಲಿ ಬಸವಾದಿ ಶರಣರು ಕಟ್ಟಿದ್ದ ಅನುಭವ ಮಂಟಪಕ್ಕೆ ಬಂದ ಮಹಾದೇವಿಯನ್ನು ಶರಣರು ಅಕ್ಕನೆಂದು ಗೌರವಿಸಿದ್ದನ್ನು ಅವರ ವಚನಗಳಿಂದ ತಿಳಿಯಬಹುದಾಗಿದೆ. ಅನೇಕ ಪರೀಕ್ಷೆಗಳನ್ನೆದುರಿಸಿದ ಮಹಾದೇವಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುವಿನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುತ್ತಾರೆ. ಕಲ್ಯಾಣದಲ್ಲಿ ಕೆಲವು ವರ್ಷವಿದ್ದ ಮಹಾದೇವಿಯವರು ವಚನಗಳನ್ನು ರಚಿಸಿ ಅನುಭಾವದೆತ್ತರಕ್ಕೇರಿ ಶರಣರಿಂದ ಅಕ್ಕನೆಂದು ಗೌರವಿಸಿಕೊಂಡು ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ಶ್ರೀಶೈಲಕ್ಕೆ ಹೋದರೆಂದು ತಿಳಿದು ಬರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ ಮಾತನಾಡಿ, ಅಕ್ಕನವರ ಸರಳ ಮತ್ತು ಸುಂದರ ವಚನಗಳು, ಇಂದಿನ ಯುವಕರಿಗೆ ಸಾಕಷ್ಟು ಸ್ಫೂರ್ತಿ ಮತ್ತು ಮಾದರಿಗಳಿವೆ. ಯುವ ಪೀಳಿಗೆಗೆ ಅರಿವು ಮೂಡಿಸಲು ಇವುಗಳ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ ಎಂದರು.

ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಲಾಯಿತು.

ಶಾಲೆಯ ಮುಖ್ಯ ಶಿಕ್ಷಕ ಕೆಂಪರಾಜು ಸಹ ಶಿಕ್ಷಕರಾದ ಪುಟ್ಟರಾಜು, ಗುರುರಾಜು, ಸುಮತಿ ಇದ್ದರು.