ಗಂಗಾವತಿ: ಅಕ್ಕಮಹಾದೇವಿ ಮಹಿಳಾ ಸಬಲೀಕರಣಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ನಿವೃತ್ತ ಉಪನ್ಯಾಸಕಿ ಜಗದೇವಿ ಕಲಶೆಟ್ಟಿ ತಿಳಿಸಿದರು.

ನಗರದ ಹಿರೇಜಂತಕಲ್ ನ ಶ್ರೀಮುಡ್ಡಾಣೇಶ್ವರ ದೇವಸ್ಥಾನದ ಶ್ರೀಗುರು ಬಸವ ಮಂಟಪದಲ್ಲಿ ಕದಳಿ ಮಹಿಳಾ ವೇದಿಕೆ ಗಂಗಾವತಿ ಮತ್ತು ನೀಲಾಂಬಿಕೆ ಮಹಿಳಾ ಮಂಡಳ ಹಿರೇಜಂತಕಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಹನ್ನೆರಡನೇ ಶತಮಾನದ ಮಹಾದೇವಿ ಜಗಕ್ಕೆ ಅಕ್ಕನಾಗಿದ್ದು, ಯಾವುದೇ ಸೌಲಭ್ಯವಿರದ 12ನೇ ಶತಮಾನದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಹಾದೇವಿ ಕೌಶಿಕನ ಇಡೀ ಸಾಮ್ರಾಜ್ಯ ಧಿಕ್ಕರಿಸಿ,ದಿಗಂಬರೆಯಾಗಿ ಚೆನ್ನಮಲ್ಲಿಕಾರ್ಜುನನೇ ನನ್ನ ಗಂಡ ಎಂದು ದಿಟ್ಟತನ ಮೆರೆದ ಮಹಾನ್ ಚೇತನ ಮಹಾದೇವಿ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಮಹಾಲಕ್ಷ್ಮೀ ಮಾತನಾಡಿ,ಮಹಾದೇವಿಯ ತತ್ವ, ಆದರ್ಶ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕ ಎಂದರು.

ಮುಖ್ಯ ಅತಿಥಿಯಾಗಿದ್ದ ವಾಣಿಶ್ರೀ ಪಾಟೀಲ್ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಸ್ಫೂರ್ತಿ ನೀಡುವ ಎಲ್ಲ ಅಂಶ ಮಹಾದೇವಿ ಅಂದೇ ನಮಗೆ ನೀಡಿದ್ದಾರೆ, ಅವು ಇಂದಿಗೂ ಮುಂದೆಂದಿಗೂ ಸ್ಫೂರ್ತಿ ಎಂದರು.


50 ವರ್ಷಗಳ ಹಿಂದೆಯೇ ಹಿರೇಜಂತಕಲ್ ನ ಅಕ್ಕಮಹಾದೇವಿ ಗುಡಿಯ ಸ್ಥಾಪಕರಲ್ಲೊಬ್ಬರಾದ ಪಾರ್ವತಮ್ಮ ಆರಾಳ ಅವರಿಗೆ ಮತ್ತು ತಾಲೂಕು ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸೌಭಾಗ್ಯಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನೀಲಾಂಬಿಕೆ ಮಹಿಳಾ ಮಂಡಳ ಹಿರೇಜಂತಕಲ್ ಅಧ್ಯಕ್ಷೆ ವಿಜಯ ಲಕ್ಷ್ಮಿ ಹೊಮ್ಮಿನಾಳ, ಜಿ. ಉಮಾದೇವಿ ಶಿವಲಿಂಗಪ್ಪ, ಪಾರ್ವತಮ್ಮ ಆರಾಳ, ಹಂಪಮ್ಮ ಪಾಲಾಕ್ಷಗೌಡ, ಚೆನ್ನಬಸಮ್ಮ ಕಂಪ್ಲಿ ಉಪಸ್ಥಿತರಿದ್ದರು.

ಸುಮಿತ್ರಾ ಸ್ವಾಗತಿಸಿದರು. ವಿಜಯಲಕ್ಷ್ಮಿ ನಾರಿನಾಳ, ಚೈತ್ರ ಗಬ್ಬೂರು ಪ್ರಾರ್ಥಿಸಿದರು, ಕವಿತಾ ರಗಡಪ್ಪ ನಿರೂಪಿಸಿದರು.