ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
1938ರಲ್ಲಿ ಬಾಗಲಕೋಟೆಯಲ್ಲಿ ಸ್ಥಾಪಿತವಾದ ಪ್ರಥಮ ಮಹಿಳಾ ಸಂಘಟನೆ ಬಿ.ವಿ.ವಿ. ಸಂಘದ ಅಕ್ಕನ ಬಳಗ ತನ್ನ 87ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು ಈ ನಿಮಿತ್ತ 5 ದಿನಗಳ ವಿಶೇಷ ಉಪನ್ಯಾಸ ಹಮ್ಮಿಕೊಂಡಿದೆ.ಏ.8ರಿಂದ ಆರಂಬಾಗಿರುವ ಕಾರ್ಯಕ್ರಮ ಏ.12ರವರೆಗೆ ನಡೆಯಲಿದ್ದು, 5 ದಿನಗಳ ಕಾಲ ವಿಶೇಷ ಉಪನ್ಯಾಸ ನಡೆಯಲಿವೆ, 12ರಂದು ಅಕ್ಕಮಹಾದೇವಿ ಜಯಂತ್ಯುತ್ಸವ ಹಾಗೂ ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಏ 9ರಂದು ಸಂಜೆ ಬಿ.ವಿ.ವಿ. ಸಂಘದ ಮಿನಿ ಸಭಾಭವನದಲ್ಲಿ ಮಹಿಳೆ ಹಾಗೂ ಜಾನಪದ ಕುರಿತು ವಿಶೇಷ ಉಪನ್ಯಾಸ, ಚರಂತಿಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಕ್ಕನ ಬಳಗದ ಕಾರ್ಯದರ್ಶಿ ಶಿವಲೀಲಾ ಮೇಡ್ಲಿ ಅಧ್ಯಕ್ಷತೆ ವಹಿಸಲಿದ್ದು, ಧಾರವಾಡದ ರಂಗ ನಿರ್ದೇಶಕಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಏ.10ರಂದು ಚರ್ಮ ಹಾಗೂ ಕೂದಲಿನ ಸುರಕ್ಷತೆ ಬಗ್ಗೆ ಆಯುರ್ವೇದ ಕಾಲೇಜಿನ ಸಹ ಪ್ರಾಧ್ಯಾಪಕಿ ಅರುಂಧತಿ ಚಿತ್ತವಾಡಗಿ ಮಾತನಾಡುವರು. ಅಕ್ಕನ ಬಳಗದ ಸದಸ್ಯೆ ಕಸ್ತೂರಿ ಗೋಪಾಲಪ್ಪನ್ನವರ ಅಧ್ಯಕ್ಷತೆ ವಹಿಸುವರು. 11 ರಂದು ಶರಣೆಯರ ಬದುಕು ಕುರಿತು ಡಾ.ಸುಮಂಗಲಾ ಮೇಟಿ ಮಾತನಾಡಲಿದ್ದು, ಗುಣದಾಳ ಕಲ್ಯಾಣ ಹಿರೇಮಠದ ಡಾ.ವಿವೇಕಾನಂದ ದೇವರು ಸಾನಿಧ್ಯ ವಹಿಸುವರು. ಕಲಾವಿದ ಬಸವರಾಜ ಅನಗವಾಡಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ. 12ರಂದು ಬೆಳಗ್ಗೆ 8 ಗಂಟೆಗೆ ಅಕ್ಕಮಹಾದೇವಿ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಕ್ಕಮಹಾದೇವಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಸಾನಿಧ್ಯವನ್ನು ಚರಂತಿಮಠದ ಪ್ರಭುಸ್ವಾಮೀಜಿ, ಇಳಕಲ್ಲಿನ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ವಹಿಸುವರು. ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ನೇತೃತ್ವವ ವಹಿಸುವರು, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಆಗಮಿಸಲಿದ್ದು, ಮಹಾದೇವಿ ಅಕ್ಕ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಚರಂತಿಮಠ ಅವರು ಭಾಗವಹಿಸುವರು.
ಅಕ್ಕ ಪ್ರಶಸ್ತಿ ಪುರಸ್ಕೃತರು: ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಭಾರತಿ ಸಾಲಿಮಠ ಅವರಿಗೆ ಮಹಾದೇವಿ ಅಕ್ಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.