ಅಕ್ಕನ ಬಳಗದ ಕಾರ್ಯ ದೇಶಕ್ಕೆ ಮಾದರಿ: ಡಿಸಿ ಜಾನಕಿ

| Published : Apr 14 2025, 01:16 AM IST

ಸಾರಾಂಶ

ಮೈಸೂರಿನ ಮಾನಸಗಂಗೋತ್ರಿಯ ಜೀವರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಭಾರತಿ ಸಾಲಿಮಠಗೆ 2025ರ ಮಹಾದೇವಿ ಅಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಸಬಲೀಕರಣ ಮುಂತಾದ ಸ್ತ್ರೀಪರ ಸಂಘಟನೆ ಉದ್ದೇಶದಿಂದ 1938ರಲ್ಲಿ ಸ್ಥಾಪನೆಗೊಂಡ ಬಿವಿವಿ ಸಂಘದ ಅಕ್ಕನ ಬಳಗ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ನಗರದ ಬಿವಿವಿ ಸಂಘದ ಅಕ್ಕನ ಬಳಗದ 87ನೇ ವಾರ್ಷಿಕೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ಮತ್ತು ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಬಿವಿವಿ ಸಂಘದ ಅಕ್ಕನ ಬಳಗ ಬಾಗಲಕೋಟೆಯಲ್ಲಿ 1938ರಲ್ಲಿಯೇ ಸ್ಥಾಪಿತವಾದ ಪ್ರಥಮ ಮಹಿಳಾ ಸಂಘಟನೆಯಾಗಿದೆ. ಇಂದು 87ನೇ ವಾರ್ಷಿಕೋತ್ಸವ ಆಚರಿಸುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿನ ಸಂಘಟಿತ ಕಾರ್ಯ, ಸಾವಿರಾರು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತಿದೆ. ಅಲ್ಲದೆ ಮಹಿಳೆಯರಿಗೆ ಸ್ವಯಂ ಉದ್ಯೋಕ್ಕಾಗಿ ಇಲ್ಲಿ ಟ್ರೈಲರಿಂಗ್ ತರಬೇತಿಗಳು ನಡೆಯುತ್ತಿವೆ ಎಂದರು.

ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಶಿಶು ವಿಹಾರ ಸ್ಥಾಪಿಸಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದೆ. ಈಗ ಆಧುನಿಕತೆ ತಕ್ಕಂತೆ ಅಕ್ಕ ಶೈನಿಂಗ್ ಸ್ಟಾರ್ ಆಗಿ ಪರಿವರ್ತನೆಗೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಸದಾ ಮಹಿಳೆಯರ ಸಮಾನತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದು ದೇಶದಲ್ಲಿ ಇದೊಂದು ಮಾದರಿ ಮಹಿಳಾ ಸಂಘಟನೆಯಾಗಿದೆ ಎಂದರು.

ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನ:

ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಭಾರತಿ ಸಾಲಿಮಠ ಅವರಿಗೆ ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಕ್ಕನ ಬಳಗ ಕಾರ್ಯ ಚಟುವಟಿಕೆ ಶ್ಲಾಘನೀಯವಾಗಿದ್ದು. ಅದರಲ್ಲೂ ಇಲ್ಲಿ ಮಹಿಳೆಯರು ರುದ್ರ ಹೇಳುವುದು ಮತ್ತಷ್ಟು ವಿಶೇಷವಾಗಿದೆ. ನಾನು ಕೂಡಾ ರುದ್ರ ಕಲಿಯುತ್ತೇನೆ. ಈ ಭಾಗದ ಶೈಕ್ಷಣಿಕ ಕ್ಷೇತ್ರ ರಾಜ್ಯದ ತುಂಬೆಲ್ಲಾ ಹೆಸರುವಾಸಿಯಾಗಿದ್ದು, ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ದೂರದೃಷ್ಟಿ ನಿಜವಾಗಲು ಸಮರ್ಥನಿಯ ಎಂದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಅಕ್ಕನ ಬಳಗ ಈ ಭಾಗದ ಮಹಿಳೆಯರಲ್ಲಿ ಶೈಕ್ಷಣಿಕ ಅರಿವು, ಮಹಿಳೆಯರಲ್ಲಿ ಸಮಾನತೆ, ಸ್ವಾವಲಂಬಿಯಾಗಿ ಬದುಕಲು ಅನೇಕ ತರಬೇತಿ ನೀಡಿ ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ. ಬಿವಿವಿ ಸಂಘದ ಅವಿಭಾಜ್ಯ ಅಂಗವಾಗಿರುವ ಅಕ್ಕನ ಬಳಗ ಸಂಘದ ಸಾಂಸ್ಕೃತಿಕ ಮಹಿಳಾ ಸಂಘಟನೆಯಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಇಲಕಲ್ಲಿನ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಅಕ್ಕ ಮಹಾದೇವಿ ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದು. ಆಕೆಯ ತತ್ವಗಳಿಗೆ ಅನುಗುಣವಾಗಿ ಅಕ್ಕನ ಬಳಗ ಬೆಳೆದು ಬಂದಿರುವುದು ಶ್ಲಾಘನೀಯ. ಮಹಿಳೆಯರಿಗೆ ಮಹಿಳೆರಿಂದಲೇ ಶಕ್ತಿ ತುಂಬುವ ಇಂಥ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ನಡೆಯಲಿ ಎಂದು ಅಕ್ಕನ ಬಳಗಕ್ಕೆ ಶುಭಕೋರಿದರು.

ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಹಾದೇವಿ ಅಕ್ಕ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಚರಂತಿಮಠ, ಅಕ್ಕನ ಬಳಗದ ಗೌರವಾಧ್ಯಕ್ಷರಾದ ಡಾ.ಅನಸೂಯಾ ಕೆರೂಡಿ, ಸವಿತಾ ಲಂಕೆನ್ನವರ, ರೇಖಾ ಕಲಬುರಗಿ, ವಿಜಯಲಕ್ಷ್ಮೀ ಭದ್ರಶೆಟ್ಟಿ, ಸೇರಿದಂತೆ ಬಳಗದ ಸದಸ್ಯರು ಸೇರಿ ಅನೇಕರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ಬೆಳಗ್ಗೆ ಅಕ್ಕಮಹಾದೇವಿ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಕ್ಕಮಹಾದೇವಿ ಉತ್ಸವ ಮೂರ್ತಿ ಪಲ್ಲಕ್ಕಿ ಮೆರವಣಿಗೆ ವಿವಿಧ ವಾದ್ಯ ವೈಭವದೊಂದಿಗೆ ನಡೆಯಿತು. ನಂತರ ಅಕ್ಕನ ಬಳಗದಲ್ಲಿ ಮಾತೆಯರಿಗೆ ಊಡಿ ತುಂಬುವ ಕಾರ್ಯಕ್ರಮ ನಡೆಯಿತು.