ಸಾರಾಂಶ
ಮಹಿಳೆಯೊಬ್ಬರಿಗೆ ಸೇರಿದ ಒಂದೇ ಜಾಗವನ್ನು ಗ್ರಾಪಂ ಪಿಡಿಒ ಇಬ್ಬರಿಗೆ ಇ-ಸ್ವತ್ತು ಮಾಡಿಕೊಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ. ಜಾಗವನ್ನು ಕಳೆದುಕೊಂಡಿರುವ ಮಹಿಳೆ ಇದೀಗ ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯೊಬ್ಬರಿಗೆ ಸೇರಿದ ಒಂದೇ ಜಾಗವನ್ನು ಗ್ರಾಪಂ ಪಿಡಿಒ ಇಬ್ಬರಿಗೆ ಇ-ಸ್ವತ್ತು ಮಾಡಿಕೊಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ. ಜಾಗವನ್ನು ಕಳೆದುಕೊಂಡಿರುವ ಮಹಿಳೆ ಇದೀಗ ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.ಗ್ರಾಮದ ಸುಗುಣ ಎಂಬುವರು ಜಾಗ ಕಳೆದುಕೊಂಡ ಮಹಿಳೆಯಾಗಿದ್ದು, ಅಕ್ಕಿಹೆಬ್ಬಾಳು ಗ್ರಾಪಂ ಪಿಡಿಒ ರವಿಕುಮಾರ್, ಕಾರ್ಯದರ್ಶಿ ಮಹೇಶ್ ಅವರು ಮಹಿಳೆಗೆ ಸೇರಿದ ಒಂದೇ ಜಾಗವನ್ನು ಇಬ್ಬರಿಗೆ ಇ-ಸ್ವತ್ತು ಮಾಡಿಕೊಟ್ಟಿರುವವರಾಗಿದ್ದಾರೆ.
ಸುಗುಣ ಎಂಬುವರ ಹೆಸರಿಗೆ ೨೦೧೫-೧೬ರಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. ತಳಪಾಯ ನಿರ್ಮಾಣ ೨೦೨೦ರ ಜನವರಿಯಲ್ಲಿ ಆರಂಭವಾಗಿ ಫೆಬ್ರವರಿಯಲ್ಲಿ ಮುಗಿದಿತ್ತು. ೧೯ ಡಿಸೆಂಬರ್ ೨೦೨೦ರಲ್ಲಿ ತಳಪಾಯದ ಜಿಪಿಎಸ್ ಆಗಿದ್ದು, ೧೭ ಮಾರ್ಚ್ ೨೦೨೧ರಲ್ಲಿ ತಳಪಾಯದ ಹಣವನ್ನು ನಿಗಮವು ಮಂಜೂರು ಮಾಡಿದ್ದಾಗಿ ಸುಗುಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ತಳಪಾಯ ನಿರ್ಮಾಣ ಮಾಡುವ ವೇಳೆ ಗ್ರಾಪಂ ಸದಸ್ಯೆ ಸಾಕಮ್ಮ ಮಂಜೇಗೌಡ ಹಾಗೂ ಸಾಕಮ್ಮ ಅವರು ತೊಂದರೆ ನೀಡಿದ್ದರು. ನಂತರದಲ್ಲಿ ಈ ಜಾಗವನ್ನು ೧೫ ಫೆಬ್ರವರಿ ೨೦೨೦ರಂದು ಇ-ಸ್ವತ್ತು ಮಾಡಿಸಿಕೊಂಡು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಾರೆ. ೮೫ ಸಾವಿರ ರು. ವೆಚ್ಚದಲ್ಲಿ ನಿರ್ಮಿಸಿದ ತಳಪಾಯದ ಮೇಲೆ ಮಣ್ಣನ್ನು ಸುರಿದು ಹಾಳುಗೆಡವಿದ್ದಾರೆ ಎಂದು ದೂರಿದರು.
ಸುಗುಣ ಅವರಿಗೆ ಸೇರಿದ ೪೫*೫೦ ಅಡಿ ಇದ್ದ ಜಾಗವನ್ನು ೩೦*೪೦ ಅಡಿ ಗೆ ಮಾತ್ರ ಇ-ಸ್ವತ್ತು ಮಾಡಿದ್ದಾರೆ. ಪೂರ್ತಿ ಜಾಗವನ್ನು ಇ-ಸ್ವತ್ತು ಮಾಡಿಕೊಡುವಂತೆ ಕೇಳಿದರೆ ಪಿಡಿಒ ರವಿಕುಮಾರ್ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ನಮ್ಮ ಜಾಗವನ್ನು ಸಾಕಮ್ಮ ಅವರ ಹೆಸರಿಗೆ ಎರಡು ಇ-ಸ್ವತ್ತು ಮಾಡಿಕೊಟ್ಟಿರುತ್ತಾರೆ ಎಂದು ಆರೋಪಿಸಿದರು.ಈ ವಿಷಯವಾಗಿ ಕೆ.ಆರ್.ಪೇಟೆ ಸಬ್ ಇನ್ಸ್‌ಪೆಕ್ಟರ್ ಸುಬ್ಬಯ್ಯ ಅವರಿಗೆ ದೂರು ನೀಡಿದರೆ ನೀವು ಕೊಟ್ಟಿರುವ ದೂರು ಸರಿಯಿಲ್ಲವೆಂದು ಉದಾಸೀನದಿಂದ ನಡೆದುಕೊಂಡಿದ್ದಾರೆ. ನ್ಯಾಯಕ್ಕಾಗಿ ಏಳೆಂಟುಬಾರಿ ಅವರ ಬಳಿಗೆ ಹೋದರೂ ದೂರನ್ನು ಪರಿಗಣಿಸಿಲ್ಲವೆಂದು ಆಪಾದಿಸಿದ್ದಾರೆ.
ಅದಕ್ಕಾಗಿ ನನಗೆ ಪೂರ್ತಿ ಜಾಗವನ್ನು ಇ-ಸ್ವತ್ತು ಮಾಡಿಸಿಕೊಡಲು ಹಾಗೂ ಖರ್ಚಾಗಿರುವ ಹಣವನ್ನು ತಳಪಾಯ ಹಾಳು ಮಾಡಿರುವವರಿಂದ ದೊರಕಿಸಿಕೊಡುವಂತೆ ಕೋರಿದ್ದಾರೆ.